

Trump: ಕಳೆದ ಕೆಲವು ದಿನಗಳಿಂದ ಸುಂಕ ಸಮರಕ್ಕಿಂತ ಆರೋಗ್ಯ ಸಮಸ್ಯೆಗಳಿಂದಲೇ ಮಾಧ್ಯಮಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮತ್ತೊಮ್ಮೆ ಭಾರತ ವಿರುದ್ಧ ಮಾತಿನ ಚಾವಟಿ ಬೀಸಿದ್ದಾರೆ.
ರಷ್ಯಾ ಮೇಲಿರುವ ಕೋಪವನ್ನು ಭಾರತದ ಮೇಲೆ ತೀರಿಸಿಕೊಳ್ಳುತ್ತಿರುವ ಟ್ರಂಪ್, ಇತ್ತೀಚೆಗಷ್ಟೇ ಹೆಚ್ಚುವರಿ ಸುಂಕವನ್ನು ವಿಧಿಸಿದರು. ಇದರ ವಿರುದ್ಧ ಭಾರತ ತೀವ್ರ ಅಸಮಾಧಾನ ಹೊರಹಾಕಿದ್ದು, ಸುಂಕ ಇಳಿಕೆಗೆ ಮೊದಲ ಮಾತುಕತೆಗೆ ಮುಂದಾಯಿತು. ಆದರೆ, ನಯವಾದ ಮಾತಿಗೆ ಬಗ್ಗದ ಟ್ರಂಪ್, ಎಂದಿನಂತೆ ತಮ್ಮ ವಾಗ್ದಾಳಿ, ಸುಂಕ ಸಮರವನ್ನು ಮುಂದುವರಿಸಿದರು. ಈ ಮಧ್ಯೆ ತಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಿರುವ ಟ್ರಂಪ್, ಅತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ರೊಂದಿಗೆ ಕೈಜೋಡಿಸಿರುವುದಕ್ಕೆ ಸಿಡಿಮಿಡಿಗೊಂಡಿದ್ದಾರೆ.
ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತ-ರಷ್ಯಾ-ಚೀನಾ ಒಗ್ಗಟ್ಟಾಗಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಎಸ್ಸಿಓ ಶೃಂಗಸಭೆಯ ಬೆನ್ನಲ್ಲೇ ತಮ್ಮ ಟ್ರೂತ್ ಸೋಷಿಯಲ್ ಜಾಲತಾಣ ಖಾತೆಯಲ್ಲಿ ಕಿಡಿಕಾರಿರುವ ಟ್ರಂಪ್, ಮತ್ತೊಮ್ಮೆ ಭಾರತದ ಮೇಲೆ ದಾಳಿ ನಡೆಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹೊರಗೆಲ್ಲಿಯೂ ಕಾಣಿಸಿಕೊಳ್ಳದ ಟ್ರಂಪ್, 'ಟ್ರೂತ್'ನಲ್ಲಿ ಸದಾ ಸಕ್ರಿಯರಾಗಿದ್ದಾರೆ. ಅಲ್ಲಿಂದಲೇ ಭಾರತ ವಿರುದ್ಧ ಗುಡುಗಿರುವ ಅವರು, ಭಾರತದೊಂದಿಗಿನ ತಮ್ಮ ವ್ಯಾಪಾರವು ಸಂಪೂರ್ಣ ಏಕಪಕ್ಷೀಯ ವಿಪತ್ತು ಎಂದು ಬಣ್ಣಿಸಿದ್ದಾರೆ.
ಭಾರತದ ಜತೆಗೆ ಅಮೆರಿಕದ ವ್ಯಾಪಾರ ಸಂಬಂಧವನ್ನು ಸಂಪೂರ್ಣ ಏಕಪಕ್ಷೀಯ ವಿಪತ್ತು ಎಂದು ಕರೆದಿರುವ ಟ್ರಂಪ್, "ಭಾರತ-ಯುಎಸ್ ವ್ಯಾಪಾರವನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಕೆಲವೇ ಜನರು ಅರ್ಥಮಾಡಿಕೊಳ್ಳುತ್ತಾರೆ. ಭಾರತ ನಮ್ಮೊಂದಿಗೆ ಬಹಳಷ್ಟು ವ್ಯಾಪಾರ ಮಾಡುತ್ತದೆ. ನಮಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತದೆ. ಆದರೆ, ಭಾರತದೊಂದಿಗೆ ನಮ್ಮ ವ್ಯಾಪಾರ-ವಹಿವಾಟು ಅತಿ ಕಡಿಮೆ. ಇಲ್ಲಿಯವರೆಗೆ, ಇದು ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧವಾಗಿದೆ. ಇದು ಹಲವು ದಶಕಗಳಿಂದ ಹಾಗೆಯೇ ಮುಂದುವರಿದುಕೊಂಡು ಬಂದಿದೆ" ಎಂದಿದ್ದಾರೆ.
"ಭಾರತವು ತನ್ನ ಹೆಚ್ಚಿನ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತದೆ. ಮತ್ತು ಅಮೆರಿಕದಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತದೆ. ಭಾರತ ಈಗ ಅಮೆರಿಕದ ಸರಕುಗಳ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಲು ಎದುರುನೋಡುತ್ತಿದೆ. ಆದರೆ, ಇದು ಈಗಾಗಲೇ ತಡವಾಗಿದೆ. ಇದನ್ನು ಹಲವು ವರ್ಷಗಳ ಹಿಂದೆಯೇ ಮಾಡಬೇಕಿತ್ತು" ಎಂದು ಟ್ರಂಪ್ ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ಟ್ರಂಪ್, ಇದೇ ಕಾರಣಕ್ಕೆ ಭಾರತೀಯ ಆಮದುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದಾರೆ ಎಂಬುದು ಇಲ್ಲಿ ಸ್ಪಷ್ಟ,(ಏಜೆನ್ಸೀಸ್).