

ಮೈಸೂರು: ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ ಟೀಕಿಸಿದರು.
ಸಿಐಟಿಯು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದ ವಿದ್ಯಾಭಾರತಿ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತಿ ನೌಕರರ ಸಮಾವೇಶದಲ್ಲಿ ಅವರು ಮಾತನಾಡಿದರು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಗ್ರಾಮಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವುದು ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಹೆಚ್ಚಳ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಆದರೆ ಖಾಸಗೀಕರಣಕ್ಕೆ ಮುಂದಾಗುವ ಮೂಲಕ ನೌಕರರ ಕೆಲಸವನ್ನು ಕಡಿತ ಮಾಡಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀಕರಣದ ಭಾಗವಾಗಿ ಕಡಿಮೆ ವೇತನ ನೀಡಿ ಜಲಸಖಿಯರನ್ನು ನೇಮಿಸಿಕೊಂಡು ವಾಟರ್‌ಮನ್‌ಗಳನ್ನು ತೆಗೆಯುವ ಕೆಲಸ ಆರಂಭವಾಗುತ್ತಿದೆ. ಹಾಗೆಯೇ ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್‌ಗಳನ್ನೂ ಕೆಲಸದಿಂದ ತೆಗೆದು ತಮಿಳುನಾಡು ಮಾದರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ತೆರೆಮರೆಯ ಯತ್ನ ನಡೆಸಿದೆ. ಈ ಮೂಲಕ ಸರ್ಕಾರ, ಗ್ರಾಮ ಪಂಚಾಯಿತಿ ನೌಕರರನ್ನು ಬೀದಿಗೆ ತಳ್ಳಲು ಹೊರಟಿದೆ ಎಂದು ಆರೋಪಿಸಿದರು.
ಕಾರಾಗೃಹ ವಾಸಿಗಳಿಗೆ ತಿಂಗಳಿಗೆ 18 ಸಾವಿರ ರೂ. ಕೂಲಿ ನಿಗದಿ ಮಾಡಿರುವ ಸರ್ಕಾರ, ಗ್ರಾಮ ಪಂಚಾಯತಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಏರಿಸುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರವೇ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಸರ್ಕಾರದ ಇಂತಹ ಧೋರಣೆ ವಿರುದ್ಧ ಜನ ವಿರೋಧಿ, ನೌಕರರ ವಿರೋಧಿ ನೀತಿಯನ್ನು ಪ್ರತಿಭಟಿಸಲು ಗ್ರಾಮ ಪಂಚಾಯತಿ ನೌಕರರು ಸಂಘಟಿತರಾಗಬೇಕು ಎಂದು ಕೋರಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಜಯರಾಂ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಮುಖಂಡರಾದ ಟಿ.ಎಸ್.ದಿನೇಶ್, ಕಿರಿಜಾಜಿ ಲೋಕೇಶ್, ರೇಖಾ ಇತರರು ಇದ್ದರು.
ಬೇಡಿಕೆಗಳ ಈಡೇರಿಕೆಗೆ ಒತ್ತಾಯ:
ಎಲ್ಲ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ಕೋಮುವಾದ, ಜಾತಿವಾದದ ವಿರುದ್ಧ ಹೋರಾಡುವುದು, ಕನಿಷ್ಠ ಕೂಲಿ 31 ಸಾವಿರ ರೂ. ನೀಡಬೇಕು, ನಿವೃತ್ತ ನೌಕರರಿಗೆ 11 ಸಾವಿರ ರೂ. ಪಿಂಚಣಿ ನೀಡಬೇಕು, ಸ್ವಚ್ಛ ವಾಹಿನಿಯವರಿಗೆ ಸರ್ಕಾರವೇ ನೇರವಾಗಿ ವೇತನ ನೀಡಬೇಕು ಎನ್ನುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ ಯಾದಗಿರಿಯಲ್ಲಿ ಸೆ.12ರಿಂದ 14ರ ವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.