

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕಿರುವ ಕ್ರೇಜ್ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್‌ಸಿಬಿಗೆ ಇರುವ ಕ್ರೇಜ್ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ. ಇಷ್ಟೊಂದು ಕ್ರೇಜ್ಗೆ ಕಾರಣ ವಿರಾಟ್ ಕೊಹ್ಲಿ. ಇನ್ನು ಆರ್ಸಿಬಿ ಮಹಿಳಾ ತಂಡವೂ ಕೂಡ ಅದೇ ಮಟ್ಟದ ಕ್ರೇಜ್ ಹೊಂದಿದೆ.
ನಿನ್ನೆಯಷ್ಟೇ ಮುಕ್ತಾಯಗೊಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮೊದಲ ಪಂದ್ಯದಲ್ಲಿ ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ಮಾತನಾಡುವಾಗ ಅಭಿಮಾನಿಗಳು ಮೊಳಗಿಸಿದ ಘೋಷಣೆಯನ್ನು ಕೇಳಿ ಒಂದು ಕ್ಷಣ ಸ್ಮೃತಿ ಅವರೇ ದಂಗಾಗಿದ್ದರು. ಇದೀಗ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಜಯಭೇರಿ ಬಾರಿಸಿದ್ದು, ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 16 ವರ್ಷಗಳ ಕಾಯುವಿಕೆಗೆ ಆರ್ಸಿಬಿ ವನಿತೆಯರು ಬ್ರೇಕ್ ಹಾಕಿದರೂ ಕೂಡ ಇನ್ನೂ ಒಂದು ಸಂಗತಿ ಆರ್ಸಿಬಿ ಅಭಿಮಾನಿಗಳನ್ನು ಕಾಡುತ್ತಲೇ ಇದೆ.
ಐಪಿಎಲ್ ಆರಂಭದಿಂದಲೂ ಆರ್ಸಿಬಿ ತಂಡ ಉತ್ತಮ ಮತ್ತು ಬಲವಾದ ತಂಡ ಎನಿಸಿಕೊಂಡಿದೆ. ಆದರೂ ಆರ್ಸಿಬಿ ಟ್ರೋಫಿ ಜಯಿಸುವಲ್ಲಿ ವಿಫಲವಾಗಿದೆ. ಟೀಂ ಇಂಡಿಯಾದಲ್ಲಿ ಕೊಹ್ಲಿ ಜನಪ್ರಿಯತೆ ಹೆಚ್ಚಾದಂತೆ ಆರ್‌ಸಿಬಿಗೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಿದೆ. ಜನಪ್ರಿಯತೆಯ ದೃಷ್ಟಿಯಿಂದ ಆರ್ಸಿಬಿ ಐಪಿಎಲ್‌ನಲ್ಲಿ ಮಾತ್ರವಲ್ಲದೆ ವಿಶ್ವದ ನಂಬರ್ ಒನ್ ಫ್ರಾಂಚೈಸಿ ಕ್ರಿಕೆಟ್ ತಂಡವಾಗಿಯೂ ಮುಂದುವರೆದಿದೆ. ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೂ ಆರ್ಸಿಬಿ ಒಂದು ದೊಡ್ಡ ಕೊರತೆ ಇನ್ನೂ ಕಾಡುತ್ತಲೇ ಇದೆ. ಅದೇನೆಂದರೆ, ಐಪಿಎಲ್ ಕಪ್. ಇಲ್ಲಿಯವರೆಗೂ 16 ಸೀಸನ್ ಕಳೆದಿದೆ. ಇದರಲ್ಲಿ ಮೂರು ಬಾರಿ ಆರ್ಸಿಬಿ ಫೈನಲ್ ತಲುಪಿದೆ. 2009, 2011 ಮತ್ತು 2016ರಲ್ಲಿ ಆರ್ಸಿಬಿ ಫೈನಲ್ ಹೋಗಿ ಸೋಲುಂಡಿತು.
ಕೊಹ್ಲಿ, ಎ ಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ಡೇಲ್ ಸ್ಟೇನ್ನಂತಹ ಸ್ಟಾರ್ ಆಟಗಾರರಿದ್ದರೂ ಆರ್ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಉತ್ತಮ ಪ್ರದರ್ಶನ ನೀಡಿದರೂ ಗೆಲುವು ಸಿಗುತ್ತಿಲ್ಲ. ಹೀಗಾಗಿ ಆರ್ಸಿಬಿ ಲಕ್ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಈ ಬಾರಿ ಆರ್ಸಿಬಿ ಮಹಿಳಾ ತಂಡ ಟ್ರೋಫಿ ಜಯಿಸುವ ಮೂಲಕನ ಗೌರವವನ್ನು ಎತ್ತಿಹಿಡಿದಿದೆ. ಕೊರತೆಯನ್ನೂ ನೀಗಿಸಿದೆ. ಆದರೂ ಆರ್ಸಿಬಿ ಮೇಲಿನ ಟ್ರೋಲ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಬದಲಾಗಿ ಇನ್ನೂ ಹೆಚ್ಚಿನ ನಿಂದನೆಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಪುರುಷರ ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. 16 ಸೀಸನ್ ಎದುರಿಸಿದರೂ ಕೂಡ ಆರ್ಸಿಬಿ ಇಲ್ಲಿಯವರೆಗೂ ಒಂದು ಬಾರಿಯೂ ಟ್ರೋಫಿ ಜಯಿಸಿಲ್ಲ. ಆದರೆ, ಮಹಿಳಾ ತಂಡ ಎರಡನೇ ಆವೃತ್ತಿಯಲ್ಲೇ ಟ್ರೋಫಿ ಜಯಿಸಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆರ್ಸಿಬಿ ಪುರುಷರ ತಂಡವನ್ನು ಗೇಲಿ ಮಾಡಲಾಗುತ್ತಿದೆ. ಬಗೆಬಗೆಯ ಮೀಮ್ಸ್ ಹರಿಬಿಡುವ ಮೂಲಕ ಆರ್ಸಿಬಿ ತಂಡವನ್ನು ಕಾಲೆಳೆಯಲಾಗುತ್ತಿದೆ. ಮಹಿಳಾ ತಂಡ ಗೆದ್ದರೂ ಆರ್ಸಿಬಿ ಟ್ರೋಲ್ ಮಾತ್ರ ಇನ್ನೂ ನಿಂತಿಲ್ಲ. (ಏಜೆನ್ಸೀಸ್)