More

    ಅರೆಭಾಷೆ ಅಕಾಡೆಮಿಯಲ್ಲಿ ಕೊಡಗಿನವರಿಗೆ ಅನ್ಯಾಯ

    ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಆಯ್ಕೆ ಸಂದರ್ಭ ಈ ಬಾರಿ ಕೂಡ ಕೊಡಗಿನವರಿಗೆ ಅನ್ಯಾಯ ಮಾಡಲಾಗಿದೆ ಎಂದು ಚಿಂತಕ ಸೂದನ ಎಸ್.ಈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅರೆಭಾಷೆಯ ಸಾಹಿತ್ಯ-ಸಂಸ್ಕೃತಿ ಆಚಾರ-ವಿಚಾರಗಳನ್ನು ಪೂರ್ವಕಾಲದಿಂದಲೂ ಉಳಿಸಿ-ಬೆಳೆಸಿಕೊಂಡು ಬಂದಿರುವ ಕೊಡಗಿನ ಅರೆಭಾಷಿಕರನ್ನು ಕಡೆಗಣಿಸುವ ಸರ್ಕಾರದ ಪ್ರಯತ್ನ ಖಂಡನೀಯ. ಕೊಡಗು ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಎಲ್ಲಾ ಭಾಷಿಕರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ ಅರೆಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುತ್ತಿರುವ ಅರೆಭಾಷಿಕರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಅರೆಭಾಷಿಕ ನಾಯಕರುಗಳು ಸರ್ಕಾರದ ಈ ಮಲತಾಯಿ ಧೋರಣೆಯನ್ನು ಸಹಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸುಮಾರು ೨೫ ವರ್ಷಗಳ ನಂತರ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರುಗಳ ಆಯ್ಕೆಯಾಗಿದೆ. ಇದಕ್ಕೆ ಪ್ರತಿಯಾಗಿ ಮತ್ತು ಅರೆಭಾಷಿಕ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲವಾಗಿ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಕೊಡಗು ಜಿಲ್ಲೆಗೆ ನೀಡಬೇಕಾಗಿತ್ತು ಎಂದು ತಿಳಿಸಿದ್ದಾರೆ.


    ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡದವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಮತ್ತೆ ಈ ಬಾರಿ ಕೂಡ ಅದೇ ಜಿಲ್ಲೆಗೆ ಅಧ್ಯಕ್ಷ ಸ್ಥಾನ ನೀಡಿರುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ಸೂದನ ಈರಪ್ಪ, ಸ್ವಾಭಿಮಾನವಿದ್ದರೆ ಕೊಡಗಿನ ಅರೆಭಾಷಿಕ ಕಾಂಗ್ರೆಸ್ಸಿಗರು ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


    ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರು ಜಿಲ್ಲೆಯ ಅರೆಭಾಷಿಕರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸುವ ಕುರಿತು ಆಸಕ್ತಿ ತೋರಬೇಕಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಹಿಂದಿನ ಅರೆಭಾಷೆ ಅಕಾಡೆಮಿ ಆಡಳಿತ ರಚಿಸಿದ್ದ ಶಬ್ದ ಕೋಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಹಾಗೂ ಮನೆಗಳ ಹೆಸರನ್ನು ಹಾಕಿ ಕೊಡಗಿನಲ್ಲಿರುವ ಗ್ರಾಮಗಳ ಹೆಸರನ್ನು ಕೈಬಿಟ್ಟಿರುವುದು ಗಮನಾರ್ಹ ಅಂಶವಾಗಿದೆ ಮತ್ತು ತಾರತಮ್ಯದ ಸಂಕೇತವಾಗಿದೆ ಎಂದು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts