

ಚೆನ್ನೈ: ಕಾಲಿವುಡ್ನಲ್ಲಿ ತಮ್ಮ ನಟನೆಗಿಂತ ಮಾತುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುವ ನಟಿ ಯಾರೆಂದರೆ ಅದು ಮೀರಾ ಮಿಥುನ್. ವಿವಾದಿತ ನಟಿ ಎಂದೇ ಖ್ಯಾತಿ ಪಡೆದಿರುವ ಮೀರಾ, ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ಸೋಲುಂಡಿದ್ದಾರೆ. ಆದರೆ, ಬರೀ ಮಾತು ಮತ್ತು ಜಗಳಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕಾಲಿವುಡ್ನ ಜನಪ್ರಿಯ ಸ್ಟಾರ್ಗಳ ಕಾಲೆಳೆಯುವುದನ್ನು ಮಾತ್ರ ರೂಢಿ ಮಾಡಿಕೊಂಡಿದ್ದಾರೆ.
ಇದೀಗ ಮೀರಾ ಅವರು ಟಾಲಿವುಡ್ನ ಸ್ಟಾರ್ ನಟಿ ತ್ರಿಷಾ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮೀರಾ ಆಡಿರುವು ಮಾತುಗಳು ತ್ರಿಷಾ ಅವರ ಅಭಿಮಾನಿಗಳನ್ನು ಕೆರಳಿಸಿದೆ.
ತ್ರಿಷಾ ಅವರು ನಾಯಕಿಯಾಗಿ ನಟಿಸಿದ ಸಿನಿಮಾದಲ್ಲಿ ನಾನು ಸಣ್ಣ ಪಾತ್ರವೊಂದನ್ನು ಮಾಡಿದ್ದೇನೆ. ಆಗ ಶೂಟಿಂಗ್ ಸಮಯದಲ್ಲಿ ಚಿತ್ರದ ನಾಯಕ ನಟ ತ್ರಿಷಾ ಜತೆ ಅಸಭ್ಯವಾಗಿ ವರ್ತಿಸಿದರು. ಮುಟ್ಟಬಾರದ ಜಾಗವೆಲ್ಲ ಮುಟ್ಟಿದರು. ಇದು ನೋಡಲು ತುಂಬಾ ಮುಜುಗರಪಡುವಂತಿತ್ತು. ಕೆಟ್ಟ ಉದ್ದೇಶದಿಂದ ಆ ನಟ ಮುಟ್ಟಿದರೂ ಅದನ್ನು ವಿರೋಧಿಸದೇ ತ್ರಿಷಾ ಮಾತ್ರ ಶಾಂತವಾಗಿದ್ದರು ಎಂದು ಮೀರಾ ಆರೋಪ ಮಾಡಿದ್ದಾರೆ.
ಸಿನಿಮಾ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ತ್ರಿಷಾ ನಟನ ಅಶ್ಲೀಲ ವರ್ತನೆಯನ್ನು ಸಹಿಸಿಕೊಂಡರು. ಆ ಸಮಯದಲ್ಲಿ ತ್ರಿಷಾ ಅವರು ಟಾಪ್ ಹೀರೋಯಿನ್ ಆಗಿದ್ದರು. ಅವರಿಗೆ ಇಂತಹ ಪರಿಸ್ಥಿತಿ ಎದುರಾಗಿರುವಾಗ ಇನ್ನೂ ಸಾಮಾನ್ಯ ನಟಿಯರ ಸ್ಥಿತಿ ಏನಾಗಬೇಡ ಎಂದು ಮೀರಾ ಹೇಳಿದ್ದಾರೆ.
ಮೀರಾ ಅವರ ಈ ಹೇಳಿಕೆ ಎಷ್ಟು ಸತ್ಯವೋ ತಿಳಿದಿಲ್ಲ. ಏಕೆಂದರೆ, ಈ ಹಿಂದೆಯೂ ಅನೇಕ ನಟ-ನಟಿಯರ ವಿರುದ್ಧ ಅಶ್ಲೀಲವಾಗಿ ಮಾತನಾಡಿ ವಿವಾದವನ್ನು ಸೃಷ್ಟಿಸಿದ ಅಪಖ್ಯಾತಿಯನ್ನು ಮೀರಾ ಹೊಂದಿದ್ದಾರೆ. ಈಗಾಗಲೇ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಸೂರ್ಯ, ಜ್ಯೋತಿಕಾ ಸೇರಿದಂತೆ ಹಲವರ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ ಅವರ ಮಾತಿಗೆ ಕೆಲವರು ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಇನ್ನು ತ್ರಿಷಾ ಅಭಿಮಾನಿಗಳು ಮಾತ್ರ ಮೀರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್)