ಇಷ್ಟು ವರ್ಷಗಳಲ್ಲಿ ಇಂಥ ಪಾತ್ರವನ್ನೇ ಮಾಡಿರಲಿಲ್ಲವಂತೆ ಗಣೇಶ್​ … ಯಾವುದು ಆ ಪಾತ್ರ?

Trible Riding - Ganesh
Published on

ಬೆಂಗಳೂರು: ಗಣೇಶ್​ ಅಭಿನಯದ 'ತ್ರಿಬಲ್​ ರೈಡಿಂಗ್' ಚಿತ್ರವು ನ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಅಂದಹಾಗೆ, ಇಷ್ಟು ವರ್ಷಗಳಲ್ಲಿ ಇಂಥದ್ದೊಂದು ಪಾತ್ರ ಮಾಡಿರಲಿಲ್ಲವಂತೆ. ಇದೇ ಮೊದಲ ಬಾರಿ 'ತ್ರಿಬಲ್​ ರೈಡಿಂಗ್​' ಚಿತ್ರದಲ್ಲಿ ಅಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, 'ನಾನು ಈ ರೀತಿಯ ಪಾತ್ರ ಇದುವರೆಗೂ ಮಾಡಿಲ್ಲ. ಇದೇ ಮೊದಲು ಎನ್ನಬಹುದು. ಚಿತ್ರದಲ್ಲಿ ಬರುವ ಟ್ವಿಸ್ಟ್​​ಗಳು ಪ್ರೇಕ್ಷಕರಿಗೆ ಹಿಡಿಸಲಿದೆ. ಕ್ಲೈಮ್ಯಾಕ್ಸ್ ಅಂತೂ ಅದ್ಭುತ. ಈಗಾಗಲೇ ಚಿತ್ರ ನೋಡಿರುವ ಗೆಳೆಯರು, ನನಗೆ ಫೋನ್ ಮಾಡಿ ನೀವು ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಕಾಣುತ್ತಿದ್ದೀರಾ ಎಂದು ಹೇಳಿದರು' ಎನ್ನುತ್ತಾರೆ ಗಣೇಶ್​.

ಎಲ್ಲ ಸರಿ, ಇಷ್ಟಕ್ಕೂ ಗಣೇಶ್​ ಚಿತ್ರದಲ್ಲಿ ಯಾವ ಪಾತ್ರ ಮಾಡಿದ್ದಾರೆ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಅವರು ಉತ್ತರಿಸುವುದಿಲ್ಲ. ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಮಜವಿರುವುದಿಲ್ಲ, ಚಿತ್ರ ನೋಡಿ ಎಂದು ಹೇಳುತ್ತಾರೆ. ಅಲ್ಲಿಗೆ ಇದುವರೆಗೂ ಮಾಡದ ಯಾವ ಪಾತ್ರವನ್ನು ಗಣೇಶ್​ ಈ ಬಾರಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವುದಿಲ್ಲ. ನ. 25ರಂದು ಚಿತ್ರ ಬಿಡುಗಡೆಯಾದಾಗಲಷ್ಟೇ ಗೊತ್ತಾಗುವುದು.

'ತ್ರಿಬಲ್​ ರೈಡಿಂಗ್​' ಚಿತ್ರವನ್ನು ಮಹೇಶ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದರೆ, ರಾಮ್​ಗೋಪಾಲ್​ ನಿರ್ಮಾಣ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್​ಗೆ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದಿತಿ ಪ್ರಭುದೇವ, ರಚನಾ ಇಂದರ್​ ಮತ್ತು ಮೇಘ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಗಣೇಶ್​ ಮತ್ತು ಮೂವರು ನಾಯಕಿಯರ ಜತೆಗೆ ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್, ಅಚ್ಯುತ್​ ಕುಮಾರ್​ ಮುಂತಾದವರು ನಟಿಸಿದ್ದು, ಸಾಯಿಕಾರ್ತಿಕ್​ ಅವರ ಸಂಗೀತ ಮತ್ತು ಜೈ ಆನಂದ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net