ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಚಿತ್ರದ ಟ್ರೇಲರ್​ ಬಿಡುಗಡೆ

Taledanda - Final
Published on

ಬೆಂಗಳೂರು: ಬೈಕ್​ ಅಪಘಾತಕ್ಕೀಡಾಗಿ ಸೋಮವಾರ ಮುಂಜಾನೆ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್​ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿದೆ. ಈ ಮಧ್ಯೆ, ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಚಿತ್ರದ ಟ್ರೇಲರ್​ ಭಾನುವಾರ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ.

ನಿಧನಕ್ಕೂ ಮುನ್ನ ಸಂಚಾರಿ ವಿಜಯ್​ 'ಮೇಲೊಬ್ಬ ಮಾಯಾವಿ', 'ಲಂಕೆ', 'ತಲೆದಂಡ' ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಆ ಚಿತ್ರಗಳೆಲ್ಲ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಮೊದಲ ಹಂತವಾಗಿ, ಈ ಚಿತ್ರಗಳ ಪೈಕಿ 'ತಲೆದಂಡ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಚಾರಿ ವಿಜಯ್​ ಯಾವತ್ತೂ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡೇ ಬಂದವರು. 'ತಲೆದಂಡ' ಚಿತ್ರದಲ್ಲಿ ಅವರು ಬುದ್ಧಿಮಾಂದ್ಯನ ಪಾತ್ರದಲ್ಲಿ ನಟಿಸಿದ್ದಾರೆ. ತಲೆದಂಡ' ಚಿತ್ರವು ಪರಿಸರ ಮತ್ತು ಮಾನವನ ನಡುವಿನ ಸಂಬಧದ ಕುರಿತಾದ ಚಿತ್ರವಾಗಿದೆ. ಪರಿಸರದ ಮೇಲೆ ಮಾನವನ ಅತಿಕ್ರಮಣ ಮುಂತಾದ ವಿಷಯಗಳನ್ನಿಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗಿದ್ದು, ಬುದ್ದಿಮಾಂದ್ಯನಾದರೂ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರವನ್ನು ವಿಜಯ್​ ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

'ತಲೆದಂಡ' ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯ್​, ಆ ಚಿತ್ರವು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗದಿದ್ದಾಗ ಸೋಷಿಯಲ್​ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈಗ ಟ್ರೇಲರ್​ ನೋಡಿದವರೆಲ್ಲರೂ ವಿಜಯ್​ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಈ ಮೆಚ್ಚುಗೆಯನ್ನು ನೋಡುವುದಕ್ಕೆ ಸಂಚಾರಿ ವಿಜಯ್​ ಇಲ್ಲ ಎಂಬುದು ಬೇಸರದ ಸಂಗತಿ.

ಪ್ರವೀಣ್​ ಕೃಪಾಕರ್​ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ 'ತಲೆದಂಡ' ಚಿತ್ರಕ್ಕೆ ಅಶೋಕ್​ ಕಶ್ಯಪ್​ ಅವರ ಛಾಯಾಗ್ರಹಣವಿದ್ದು, ಸಂಚಾರಿ ವಿಜಯ್​ ಅಲ್ಲದೆ ಮಂಡ್ಯ ರಮೇಶ್​, ಬಿ. ಸುರೇಶ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net