

ಫೈಸಲಾಬಾದ್: ಲ್ಯಾಪ್‌ಟಾಪ್ ಸ್ಫೋಟದಿಂದ ಉಂಟಾದ ವಿನಾಶಕಾರಿ ಬೆಂಕಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಘಟನೆ ಫೈಸಲಾಬಾದ್‌ನ ಶರೀಫ್‌ಪುರದಲ್ಲಿ ನಡೆದಿದೆ. ದುವಾ(6) ಮತ್ತು ತಹಾ(9) ಮೃತ ದುರ್ದೈವಿಗಳು.
ಚಾರ್ಜ್ ಮಾಡಲು ಪ್ಲಗ್ ಹಾಕಿದಾಗ ಲ್ಯಾಪ್‌ಟಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಬಳಿಕ ಬೆಂಕಿ ಇಡೀ ಮನೆಗೆ ಆವರಿಸಿದೆ. ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಮೂರರಿಂದ ಒಂಬತ್ತು ವರ್ಷದೊಳಗಿನ ಐದು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡು ತೀರ್ವವಾಗಿ ಸುಟ್ಟಗಾಯಗಳಿಗೆ ತುತ್ತಾಗಿದ್ದರು.
ಕೂಡಲೇ ಗಾಯಾಳುಗಳನ್ನು ರಕ್ಷಿಸಿ ಫೈಸಲಾಬಾದ್‌ನ ಅಲೈಡ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಆರು ವರ್ಷದ ಬಾಲಕಿ ದುವಾ ಮತ್ತು ಒಂಬತ್ತು ವರ್ಷದ ತಾಹಾ ಎಂಬ ಬಾಲಕ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಸ್ಫೋಟದ ನಿರ್ದಿಷ್ಟ ಕಾರಣವನ್ನು ವಿವರಿಸಲಾಗಿಲ್ಲವಾದರೂ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಲ್ಲಿನ ದೋಷಯುಕ್ತ ಲಿಥಿಯಂ-ಐಯಾನ್ ಬ್ಯಾಟರಿಗಳು ಅತಿಯಾಗಿ ಬಿಸಿಯಾದಾಗ ಅಪರೂಪದ ಸಂದರ್ಭಗಳಲ್ಲಿ ಸ್ಫೋಟಗೊಳ್ಳುತ್ತವೆ. ಇದೂ ಸಹ ಅದೇ ರೀತಿಯ ಘಟನೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.