

Supreme Court : ಮಹಿಳೆಯರ ಸ್ತನ ಸ್ಪರ್ಶಿಸಿ, ಪೈಜಾಮಾ ದಾರ ಎಳೆದ ಮಾತ್ರಕ್ಕೆ ಆರೋಪಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧವನ್ನು ಹೊರಿಸಲು ಸಾಧ್ಯವಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ (ಮಾರ್ಚ್ 26) ತಡೆಹಿಡಿದಿದ್ದು, ತೀವ್ರ ಅಸಮಾಧಾನವನ್ನು ಹೊರಹಾಕಿದೆ.
ಇಂದು ನಡೆದ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ಹೊರಹಾಕಿತು. ಹೈಕೋರ್ಟ್ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ನಿರ್ವಹಿಸುವಲ್ಲಿ ಸಂಪೂರ್ಣ ಅಸಂವೇದನಾಶೀಲತೆ ಪ್ರದರ್ಶಿಸಿದ್ದಾರೆಂದು ಟೀಕಿಸಿತು.
ನ್ಯಾಯಮೂರ್ತಿಗಳ ವಿರುದ್ಧ ಕಠಿಣ ಪದ ಬಳಕೆ ನಿಜಕ್ಕೂ ವಿಷಾದಕರವೇ, ಆದರೆ ಇದೊಂದು ಗಂಭೀರ ವಿಷಯವಾಗಿದ್ದು, ಇಲ್ಲಿ ನ್ಯಾಯಮೂರ್ತಿಗಳು ಈ ಆದೇಶವನ್ನು ತಕ್ಷಣವೇ ಹೊರಡಿಸಿಲ್ಲ ಎಂಬುದು ಗೊತ್ತಿದೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳ ನಡೆಯನ್ನು ಟೀಕಿಸಿತು.
ಪ್ಯಾರಾ 24, 25, 26ರಲ್ಲಿ ಪಟ್ಟಿಮಾಡಲಾದ ಅವಲೋಕನಗಳು ಕಾನೂನಿನಲ್ಲಿ ಸಮರ್ಥನೀಯವಲ್ಲದ ಕಾರಣ ಮತ್ತು ಅಸಂವೇದನಾಶೀಲತೆಯನ್ನು ಬಿಂಬಿಸುವುದರಿಂದ, ನಾವು ಈ ತೀರ್ಪನ್ನು ತಡೆಹಿಡಿಯಲು ಬಯಸುತ್ತೇವೆ. ಈ ವಿಚಾರವಾಗಿ ನಾವು ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡುತ್ತೇವೆ. ಈ ವಿಷಯದಲ್ಲಿ ಎಜಿ ಮತ್ತು ಎಸ್‌ಜಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಸಮರ್ಥರಾಗಿದ್ದಾರೆ ಎಂದು ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ಅನ್ನು ಉಲ್ಲೇಖಿಸಿ ಹೇಳಿತು.
ಪವನ್ ಮತ್ತು ಆಕಾಶ್ ಎಂಬ ಇಬ್ಬರು, ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮ ದಾರವನ್ನು ಹಿಡಿದೆಳೆದು, ಆಕೆಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರು. ಈ ಘಟನೆ ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ದಾರಿಹೋಕರನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವಿವಾದಾತ್ಮಕ ಆದೇಶ ಹೊರಡಿಸಿತ್ತು. ಆರಂಭದಲ್ಲಿ, ಅವರ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ಅವರ ಕ್ರಿಯೆಗಳನ್ನು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನ ಅಂತಾ ಹೇಳಲಾಗುವುದಿಲ್ಲ ಎಂದಿತು. ಅಲ್ಲದೆ, ಇದು ಲೈಂಗಿಕ ದೌರ್ಜನ್ಯದ ಕಡಿಮೆ ಆರೋಪದ ಅಡಿಯಲ್ಲಿ ಬರುತ್ತದೆ ಎಂದು ತೀರ್ಪು ನೀಡಿತು. ಈ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸುಪ್ರಿಂಕೋರ್ಟ್, ಹೈಕೋರ್ಟ್ ಆದೇಶವನ್ನು ತಡೆಹಿಡಿದಿದೆ. (ಏಜೆನ್ಸೀಸ್)