ಇಂದು ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಮತಬೇಟೆ: BJP ಸಮಾವೇಶಕ್ಕೆ ಬರುವವರಿಗೆ ಹಲವು ನಿರ್ಬಂಧ

PM modi
Published on

ಚಿತ್ರದುರ್ಗ: ಇಂದು ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಂದೋಬಸ್ತ್​ ಮಾಡಲಾಗಿದೆ. ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆಯಾಗಿದೆ. ಹೊಸ ಹೈವೇ ಮೂಲಕ ಬಸ್ ನಿಲ್ದಾಣಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ಹಲವು ನಿರ್ಬಂಧಗಳು

ಜೆಎಂಐಟಿ ವೃತ್ತ, ಹೊಸ ಬೈಪಾಸ್ ಮೂಲಕ ಸಂಚಾರಕ್ಕೆ ಸೂಚನೆ ಕೊಡಲಾಗಿದೆ. ಬಿಜೆಪಿ ಸಮಾವೇಶಕ್ಕೆ ಬರುವವರಿಗೆ ಹಲವು ನಿರ್ಬಂಧ ಹೇರಲಾಗಿದೆ. ಕಪ್ಪು ಬಟ್ಟೆ ಧರಿಸುವಂತಿಲ್ಲ, ಬೆಂಕಿ ಪೊಟ್ಟಣ,‌ ಲೈಟರ್ ತರುವಂತಿಲ್ಲ, ನೀರಿನ ಬಾಟಲ್, ಬ್ಯಾಗ್, ಸ್ಫೋಟಕ‌ ಸಾಮಗ್ರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಭಿತ್ತಿಫಲಕಗಳನ್ನು ತರುವಂತಿಲ್ಲ ಹಾಗೂ ಅಪಾಯಕಾರಿ ವಸ್ತು ತರುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ.

ಮೋದಿಗೆ ಉಡುಗೊರೆ

ಮೋದಿಗೆ ಶೇಂಗಾದಿಂದ ತಯಾರಿಸಿದ ವಿಶಿಷ್ಟ ಹಾರದಿಂದ ಗೌರವ ಸಲ್ಲಿಸಲಾಗುತ್ತದೆ. ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಗೌರವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಪ್ರಧಾನಿ ಮೋದಿ ಅವರ ತಾಯಿ, ಅವರ ಹಣೆಗೆ ತಿಲಕವಿಟ್ಟ ಪೇಂಟಿಂಗ್ ಹಾಗೂ ಮೋದಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹ ಗಿಫ್ಟ್ ನೀಡಲು‌‌ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಿಜೆಪಿ ಪ್ರಚಾರ ಸಭೆ ಮೂಲಕ ದಲಿತ, ಲಿಂಗಾಯತ ಮತ ಸೆಳೆಯಲು ಪ್ಲಾನ್ ಮಾಡಲಾಗಿದೆ. ಚಿತ್ರದುರ್ಗ-ದಾವಣಗೆರೆಯಲ್ಲಿ ಎಸ್ಸಿ-ಎಸ್ಟಿ,‌ ಲಿಂಗಾಯತರ ಮತ ನಿರ್ಣಾಯಕವಾಗಿದೆ. ಚಿತ್ರದುರ್ಗ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಚಿತ್ರದುರ್ಗ ಎಂಎಲ್​ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ಅಭ್ಯರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಅಬ್ಬರದ ಪ್ರಚಾರ

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಪ್ರಚಾರ ಸಭೆ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಚಿತ್ರದುರ್ಗದ 6 ಕ್ಷೇತ್ರ, ದಾವಣಗೆರೆಯ 4 ಕ್ಷೇತ್ರದ ಜಿಲ್ಲೆಯ ಜನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಜಗಳೂರು ಈ 10 ಕ್ಷೇತ್ರಗಳ‌ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಪ್ರಚಾರ ಸಭೆಗೆ 75ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಐದು ಕಡೆ ವಾಹನಗಳ ಪಾರ್ಕಿಂಗ್​ ವ್ಯವಸ್ಥೆ ಇದೆ. ಸಮಾವೇಶಕ್ಕೆ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 2018ರಲ್ಲಿ 10 ರಲ್ಲಿ 8 ಮತಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು. ಹೀಗಾಗಿ ಮತ್ತೆ ಚಿತ್ರದುರ್ಗ-ದಾವಗೆರೆಯಲ್ಲಿ ಬಿಜೆಪಿ ಗೆಲ್ಲಿಸಲು ಬಿಜೆಪಿ ರಣತಂತ್ರ ಮಾಡಿದೆ.

ಮತ ಸೆಳೆಯಲು ರಣತಂತ್ರ

ಎಸ್ಸಿ, ಎಸ್ಟಿ ಮತ್ತು ಲಿಂಗಾಯತ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಕೋಟೆನಾಡಿನ ಬುಡಕಟ್ಟು ಸಂಸ್ಕೃತಿ ಬಿಂಬಿಸಲು ಪ್ಲಾನ್ ಮಾಡಲಾಗಿದೆ. ಮೋದಿಗೆ ಮ್ಯಾಸ ಬೇಡರ ಧಿರಿಸಿನ ಮಾದರಿ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೋದಿಗೆ ಕಂಬಳಿ ಹೊದಿಸಿ ಗೌರವ ಸಲ್ಲಿಸಲು ಬಿಜೆಪಿ ನಾಯಕರು ಮುಂದಾಗಿದೆ. ನಾಯಕ‌ ಸಮುದಾಯದ ಮತ ಸೆಳೆಯಲು ಬಿಜೆಪಿ ರಣತಂತ್ರ ಮಾಡಿದ್ದು, ತಮಟೆ ಬಾರಿಸಿ ಸಮಾವೇಶ ಉದ್ಘಾಟನೆಗೆ ಬಿಜೆಪಿ ಮುಂದಾಗಿದೆ. ಅಲ್ಲದೆ, ದಲಿತ ಸಮುದಾಯಗಳ ಗಮನ ಸೆಳೆಯಲು ಮೋದಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹ ಗಿಫ್ಟ್ ನೀಡಲು‌‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5.300ಕೋಟಿ ರೂ. ಅನುದಾನ, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸೇರಿ ಇತರೆ ಯೋಜನೆಗಳ ಬಗ್ಗೆ ಮೋದಿ ಮಾತನಾಡುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net