

| ಹರ್ಷವರ್ಧನ್ ಬ್ಯಾಡನೂರು
ಅದಾ ಶರ್ಮಾ ಅವರು 15ಕ್ಕೂ ಹೆಚ್ಚು ಹಿಂದಿ, ತೆಲುಗು ಸಿನಿಮಾಗಳು ಸೇರಿದಂತೆ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜತೆ ನಾಯಕಿಯಾಗಿ ‘ರಣವಿಕ್ರಮ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅಭಿನಯಿಸಿದ್ದು, ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗಲಿದೆ. ಸುದೀಪ್ತೋ ಸೇನ್ ನಿರ್ದೇಶನದ ಮತಾಂತರ ಮತ್ತು ಭಯೋತ್ಪಾದನೆ ಸುತ್ತ ಸುತ್ತುವ ನೈಜ ಘಟನೆಯಾಧಾರಿತ ಚಿತ್ರವಿದು ಎನ್ನಲಾಗಿದೆ. ಸದ್ಯ ಚಿತ್ರದ ಬಿಡುಗಡೆಗೆ ಕೆಲವು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಎಲ್ಲದರ ನಡುವೆ ನಾಯಕಿ ಅದಾ ಶರ್ಮಾ ‘ದಿ ಕೇರಳ ಸ್ಟೋರಿ’ ಕಥೆ, ಪಾತ್ರ, ಸಿದ್ಧತೆ, ಸವಾಲು, ವಿವಾದಗಳ ಬಗ್ಗೆ ಎಕ್ಸ್ಕ್ಲೂಸಿವ್ ಆಗಿ ವಿಜಯವಾಣಿ ಜತೆ ಮಾತನಾಡಿದ್ದಾರೆ.
ಕಥೆ ಓದುವಾಗಲೇ ಸಮಸ್ಯೆಗೆ ಒಳಗಾಗಿದ್ದ ಹೆಣ್ಣುಮಕ್ಕಳೊಂದಿಗೆ ಕನೆಕ್ಟ್ ಆಗಿದ್ದೆ. ನಾನೂ ಕೇರಳ ಮೂಲದವಳಾದ ಕಾರಣ, ಆ ಹುಡುಗಿಯರು ಯಾವ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದರು ಎಂಬುದರ ಅನುಭವ ನನಗೂ ಆಯಿತು. ನಾನು ನನ್ನ ಅಮ್ಮನಿಗೆ ತುಂಬ ಕ್ಲೋಸ್. ಈ ಚಿತ್ರದಲ್ಲೂ ಅಮ್ಮ-ಮಗಳ ಬಾಂಧವ್ಯದ ಕುರಿತ ಕಥೆಯಿರುವ ಕಾರಣ ತುಂಬ ಆಪ್ತವೆನಿಸಿತು. ಸಿನಿಮಾ ನೋಡುವ ಪ್ರತಿಯೊಬ್ಬ ಹೆಣ್ಣು ಕಥೆಯ ಜತೆ ಗುರುತಿಸಿಕೊಳ್ಳುತ್ತಾರೆ.
ಅಮ್ಮ - ಮಗಳ ನಡುವಿನ ಭಾವನಾತ್ಮಕ ಸನ್ನಿವೇಶದ ಚಿತ್ರೀಕರಣದ ವೇಳೆ ಎಮೋಷನಲ್ ಆಗುಬಿಡುತ್ತಿದ್ದೆ. ಹೀಗಾಗಿ ಚಾಲೆಂಜಿಂಗ್ ಎನಿಸುತ್ತಿತ್ತು. ಅತ್ಯಾಚಾರದಂತಹ ಸನ್ನಿವೇಶಗಳ ಚಿತ್ರೀಕರಣ ಯಾವಾಗಲೂ ಕಷ್ಟವೆನಿಸುತ್ತದೆ. ಆದರೆ, ಒಂದೊಳ್ಳೆ ತಂಡ, ಅದ್ಭುತ ನಿರ್ದೇಶಕರು ಇದ್ದ ಕಾರಣ ಶೂಟಿಂಗ್ ಬಳಿಕ ಮನೆಗೆ ತೆರಳಿ ಸ್ನಾನ ಮಾಡಿ, ನೆಮ್ಮದಿಯಿಂದ ನಿದ್ರಿಸುತ್ತಿದ್ದೆ. ಆದರೆ, ನಿಜ ಜೀವನದಲ್ಲಿ ಆ ಹಿಂಸೆ ಅನುಭವಿಸಿದ ಹೆಣ್ಣುಮಕ್ಕಳು ಹಾಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಬಗ್ಗೆ ಯೋಚಿಸಿದಾಗ, ಅವರು ಎದುರಿಸಿದ ಸವಾಲುಗಳ ಮುಂದೆ ನನ್ನದೇನೂ ಅಲ್ಲ ಅಂತ ತಿಳಿಯುತ್ತಿತ್ತು.
ಹೌದು, ಕೆಲವರನ್ನು ಭೇಟಿಯಾಗಿ, ಮಾತನಾಡಿಸಿದ್ದೆ. ಜತೆಗೆ ಅವರು ಬರೆದುಕೊಂಡಿದ್ದ ಅನುಭವಗಳು, ಸಂಗ್ರಹಿಸಿದ್ದ ಮಾಹಿತಿಯನ್ನು ತುಂಬಾ ಓದಿದ್ದೇನೆ. ಅವರಲ್ಲೊಬ್ಬರು ನಮ್ಮ ಸಿನಿಮಾ ನೋಡಿ, ‘ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಮೆಸೇಜ್ ಕೂಡ ಮಾಡಿದ್ದರು. ಇನ್ನೂ ಹಲವು ವಿಷಯಗಳ ಬಗ್ಗೆ ಹೇಳಿದರು. ಆದರೆ, ಅದನ್ನು ಸಾರ್ವಜನಿಕವಾಗಿ ರ್ಚಚಿಸಲು ನನಗೆ ಇಷ್ಟವಿಲ್ಲ.
ಚಿತ್ರದ ಶೇಕಡಾ 20ರಷ್ಟು ಮಾತ್ರ ಟ್ರೇಲರ್ನಲ್ಲಿ ತೋರಿಸಿದ್ದೇವೆ. ತುಂಬ ಜನ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಉಗ್ರವಾದ ಮತ್ತು ಮಾನವೀಯತೆಯ ನಡುವಿನ ಸಂಘರ್ಷದ ಕಥೆಯನ್ನು ನಿರೀಕ್ಷಿಸಬಹುದು. ಕೆಲವರು, ಈ ಚಿತ್ರವನ್ನು ಪ್ರಚಾರಕ್ಕಾಗಿ ಮಾಡಿದ್ದಾರೆ, ಚುನಾವಣಾ ತಂತ್ರ, ಧರ್ಮಗಳ ನಡುವೆ ತಂದಿಡಲು ಸಿನಿಮಾ ಮಾಡಿದ್ದಾರೆ ಅಂತೆಲ್ಲ ಬಿಂಬಿಸಲು ಯತ್ನಿಸುತ್ತಿದ್ದಾರೆ. ಸಿನಿಮಾ ನೋಡಿದ ಬಳಿಕ ಇದು ಜೀವನದಲ್ಲಿ ಭಯಾನಕ ಸಂಕಷ್ಟಗಳನ್ನು ಎದುರಿಸಿದ ಹೆಣ್ಣುಮಕ್ಕಳ ಭಾವನಾತ್ಮಕ ಪಯಣದ ಕಥೆ ಅಂತ ಎಲ್ಲರಿಗೂ ಗೊತ್ತಾಗಲಿದೆ.
ನನ್ನ ಅಜ್ಜಿ ಮಲಯಾಳಿಯಾದ ಕಾರಣ, ನಾನು ಮನೆಯಲ್ಲಿ ಮಲಯಾಳಂನಲ್ಲೇ ಮಾತನಾಡುತ್ತೇನೆ. ನಾನು ನಟಿಸಿರುವ ಶಾಲಿನಿ ಉನ್ನಿಕೃಷ್ಣನ್ ಪಾತ್ರ, ಚಿತ್ರದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ. ಹೀಗಾಗಿ ನರ್ಸಿಂಗ್ ಪುಸ್ತಕಗಳನ್ನು ಓದುತ್ತಿದ್ದೆ. ಹಲವಾರು ವರ್ಕ್ಶಾಪ್ಗಳಲ್ಲಿ ಭಾಗವಹಿಸಿ, ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡೆ.