More

    ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿ ಟಾರ್ಗೆಟ್; ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ, ಗೆಲ್ಲುವ ತಂತ್ರ

    | ಚೇತನ್ ಪದ್ಮಸಾಲಿ ಚಿಕ್ಕಮಗಳೂರು

    ಎರಡು ದಶಕದಿಂದ ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈ ಬಾರಿ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಇದಕ್ಕೆ ಎರಡು ಕಾರಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವಿ ವಿರುದ್ಧ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವವರು ಅವರದೇ ಪಕ್ಷದ ಸ್ನೇಹಿತ ಎಚ್.ಡಿ.ತಮ್ಮಯ್ಯ. ಜೆಡಿಎಸ್ ಕೂಡ ಕಾಂಗ್ರೆಸ್ ಬೆಂಬಲಿಸಿದ್ದು, ಅಲ್ಲಿಗೆ ಸಿ.ಟಿ. ರವಿ ಟಾರ್ಗೆಟ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಎರಡು ದಶಕಗಳ ನಂತರ ಪ್ರಬಲ ಪೈಪೋಟಿ ಎದುರಾಗಿದೆ. ಸಿ.ಟಿ. ರವಿ ವಿರುದ್ಧ (ಬಿಜೆಪಿ ಅಲ್ಲ) ಎಲ್ಲ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಕುರುಬ, ಮುಸ್ಲಿಂ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡಗಳು ಹೆಚ್ಚು ಮತದಾರರನ್ನು ಹೊಂದಿವೆ. ಸಣ್ಣ ಸಮುದಾಯದ ಮತಗಳು ಒಟ್ಟಿಗೆ ಸೇರಿದರೆ ಅವುಗಳೇ ನಿರ್ಣಾಯಕ ಎನಿಸಬಹುದು. ವೀರಶೈವ ಲಿಂಗಾಯತ, ಕುರುಬ, ಮುಸ್ಲಿಮರ ವೋಟ್ ಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣುಹಾಕಿದೆ.

    ಜೆಡಿಎಸ್ ಅಭ್ಯರ್ಥಿ ತಿಮ್ಮ ಶೆಟ್ಟಿ ಕಣದಲ್ಲಿದ್ದರೂ ಇದೇ ಪಕ್ಷದ ಎಂಎಲ್​ಸಿ ಎಸ್.ಎಲ್.ಬೋಜೇಗೌಡ ಕೈ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪರ ಬಹಿರಂಗವಾಗಿಯೇ ಮತಯಾಚಿಸುತ್ತಿದ್ದಾರೆ. ಪಕ್ಷದ ಉಳಿವಿಗಾಗಿ, ಕಾರ್ಯಕರ್ತರ ಒಮ್ಮತ್ತದ ನಿರ್ಧಾರದಿಂದ ಕಾಂಗ್ರೆಸ್ ಪರ ಪ್ರಚಾರದಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಸದ್ಯಕ್ಕೆ ಬಲಪ್ರದರ್ಶನ ಮಾಡುತ್ತಿದ್ದರೂ ಟಿಕೆಟ್ ಕೈ ತಪ್ಪಿದವರ ನಿಲುವು ಏನು ಎಂಬ ಪ್ರಶ್ನೆಯೂ ಕಾಡುತ್ತಿದೆ. ಬಿಜೆಪಿ ಬೂತ್ ಮಟ್ಟದಲ್ಲಿ ಸಭೆ ನಡೆಸುತ್ತ ಕಳೆದ ಚುನಾವಣೆಗಿಂತ ಅತಿ ಹೆಚ್ಚು ಅಂತರದಲ್ಲಿ ಗೆಲುವು ನಮ್ಮದೇ ಎನ್ನುತ್ತಿದೆ. ಎಲ್ಲ ರೀತಿಯಿಂದಲೂ ಪ್ರಬಲವಾಗಿರುವ ಸಿ.ಟಿ. ರವಿ ವಿರುದ್ಧ ತಮ್ಮಯ್ಯ ಮೇಲ್ನೋಟಕ್ಕೆ ಬಲಾಢ್ಯ ಎನ್ನಿಸುತ್ತಿಲ್ಲ. ಆದರೆ ಪ್ರಬಲ ನಾಯಕರ ಎದುರು ಹೆಸರೇ ಇಲ್ಲದಂಥ ವ್ಯಕ್ತಿಗಳು ಗೆದ್ದ ನಿದರ್ಶನ ಕರ್ನಾಟಕದಲ್ಲಿವೆ. ಸಿ.ಟಿ. ರವಿ ವಿರೋಧಿಗಳು ಒಗ್ಗಟ್ಟಾದರೆ ಈ ಚುನಾವಣೆ ವಿಶೇಷವಾಗಿರಲಿದೆ.

    ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿ ಟಾರ್ಗೆಟ್; ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ, ಗೆಲ್ಲುವ ತಂತ್ರಕಡೂರಲ್ಲಿ ಮತ್ತೆ ಅರಳುವುದೇ ಕಮಲ?

    ಕಡೂರಿನಲ್ಲಿ ಒಮ್ಮೆ ಗೆದ್ದವರು ಸತತ 2ನೇ ಬಾರಿ ಜಯಗಳಿಸಿದ ಇತಿಹಾಸವೇ ಇಲ್ಲ. ಆದರೆ, ಈ ಅನಪೇಕ್ಷಿತ ದಾಖಲೆಯನ್ನು ಈ ಚುನಾವಣೆಯಲ್ಲಿ ಅಳಿಸಿಹಾಕ ಬೇಕೆಂದು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷ ಎಂದರೆ ಎಲ್ಲಿಯೂ ಪ್ರತಿಸ್ಪರ್ಧಿಗಳನ್ನು ಟೀಕೆ ಮಾಡುತ್ತಿಲ್ಲ. ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿರುವೆ ಎಂದು ಮತದಾರರ ಬಳಿ ಹೋಗಿದ್ದಾರೆ. ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಈ ಬಾರಿ ಮತ್ತೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ವೈಎಸ್​ವಿ ದತ್ತ ಜೆಡಿಎಸ್ ಗೂಡಿಗೆ ಮತ್ತೆ ಮರಳಿದ್ದು, ಇದು ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡಿದ್ದಾರೆ. ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಪಂಗಡ, ಉಪ್ಪಾರ, ತೆಲುಗು ಗೌಡ ಸೇರಿ ಸಣ್ಣ ಸಣ್ಣ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ. ಪ್ರತಿಯೊಂದು ಸಮುದಾ ಯದ ಮತ ಸೆಳೆಯಲು 3 ಪಕ್ಷಗಳು ಮುಂದಾಗಿವೆ. ಶಾಸಕ ಬೆಳ್ಳಿ ಪ್ರಕಾಶ್ ಅಭಿವೃದ್ಧಿ ಆಧಾರ ಹಾಗೂ ದೇಶಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂಬ ಅಜೆಂಡಾ ಮುಂದಿಟ್ಟಿದ್ದಾರೆ. ಕ್ಷೇತ್ರದಲ್ಲಿ ಪ್ರಬಲವಾದ ವೀರಶೈವ ಲಿಂಗಾಯತ ಮತಗಳ ಜತೆಗೆ ಇತರ ಸಮುದಾಯಗಳ ಬೆಂಬಲ ಸಿಕ್ಕರೆ ಬೆಳ್ಳಿ ಪ್ರಕಾಶ್ ಸತತ 2 ಗೆಲುವು ದಾಖಲಿಸುವುದರಲ್ಲಿ ಸಂದೇಹ ಇಲ್ಲ. ಕುರುಬ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಕೂಡ ಸಮಾಜದ ಮತಗಳನ್ನೇ ನೆಚ್ಚಿಕೊಂಡಿದ್ದಾರೆ.

    ಶಾರದೆ ಕೃಪೆ ಯಾರಿಗೆ?

    ಕೊಪ್ಪ, ಎನ್.ಆರ್.ಪುರ ತಾಲೂಕುಗಳನ್ನು ಒಳಗೊಂಡ ಶೃಂಗೇರಿ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಿದ್ದಾಜಿದ್ದಿ ನಡೆದಿದೆ. ಉದ್ಯಮಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಕಣದಲ್ಲಿದ್ದಾರೆ. ಹಾಲಿ ಶಾಸಕ ಟಿ.ಡಿ.ರಾಜೇಗೌಡ ಕಾಂಗ್ರೆಸ್​ನಿಂದ 2ನೇ ಬಾರಿ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ 6 ಬಾರಿ ಸ್ಪರ್ಧಿಸಿರುವ ಡಿ.ಎನ್.ಜೀವರಾಜ್ ಸಮ ನಾಗಿ ಸೋಲು-ಗೆಲುವು ಕಂಡಿದ್ದು, 4ನೇ ಬಾರಿ ಗೆಲುವಿನ ಲೆಕ್ಕಚಾರದಲ್ಲಿದ್ದಾರೆ. ಇವರಿಬ್ಬರ ನಡುವೆ ಜೆಡಿಎಸ್ ಅಭ್ಯರ್ಥಿ ಕೂಡ ಪೈಪೋಟಿ ಒಡ್ಡಿದ್ದಾರೆ. ಜೆಡಿಎಸ್ ಪಡೆಯುವ ಮತಗಳ ಆಧಾರದ ಮೇಲೆ ಕಾಂಗ್ರೆಸ್, ಬಿಜೆಪಿ ಗೆಲುವು ನಿರ್ಧಾರವಾಗಲಿದೆ. ಮೂವರೂ ಪ್ರಚಾರದ ಭರಾಟೆಯಲ್ಲಿದ್ದು, ಶಾರದಾಂಬೆ ಕೃಪೆ ಯಾರಿಗೆ ಒಲಿಯುತ್ತೋ ಕಾದುನೋಡಬೇಕಿದೆ.

    ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿ ಟಾರ್ಗೆಟ್; ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ, ಗೆಲ್ಲುವ ತಂತ್ರಮೂಡಿಗೆರೆಯಲ್ಲಿ ತ್ರಿಕೋನ ಕಣ

    ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ಎಂ.ಪಿ. ಕುಮಾರಸ್ವಾಮಿ ಈಗ ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ದೀಪಕ್ ದೊಡ್ಡಯ್ಯ, ಕಾಂಗ್ರೆಸ್​ನಿಂದ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾ ಕಣದಲ್ಲಿದ್ದಾರೆ. ಎಂ.ಪಿ. ಕುಮಾರಸ್ವಾಮಿಗೆ ವಿರೋಧಿ ಬಣ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಯಿತು. ಈಗ ಜೆಡಿಎಸ್ ನಿಂದ ಕಣದಲ್ಲಿರುವ ಅವರು ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷದ ಸಾಂಪ್ರದಾಯಿಕ ಮತಗಳನ್ನು ನೆಚ್ಚಿ ಕೊಂಡಿದ್ದಾರೆ. ಕಾಂಗ್ರೆಸ್​ನ ನಯನಾ ತಾಯಿಯ ಕೆಲಸ, ಪಕ್ಷದ ಮತ ಗಳಿಂದ ಗೆಲುವು ಸಾಧಿಸಲು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ಕಾರ್ಯಕರ್ತರ ಪಡೆ ಅಭ್ಯರ್ಥಿ ಬೆನ್ನಿಗೆ ನಿಂತಿದೆ.

    ತರೀಕೆರೆಯಲ್ಲಿಯೂ ತ್ರಿಕೋನ

    ಬಿಜೆಪಿ ಶಾಸಕ ಡಿ.ಎಸ್.ಸುರೇಶ್, ಕಾಂಗ್ರೆಸ್​ನ ಮಾಜಿ ಶಾಸಕ ಜಿ.ಶ್ರೀನಿವಾಸ್ ಹಾಗೂ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ನಡುವೆ ಕದನಕ್ಕೆ ಚುನಾವಣಾ ರಣರಂಗದ ವೇದಿಕೆ ಸೃಷ್ಟಿಯಾಗಿದೆ. ವೀರಶೈವ ಲಿಂಗಾಯತ ಹಾಗೂ ಕುರುಬ ಸಮುದಾಯಗಳೇ ಇಲ್ಲಿ ನಿರ್ಣಾಯಕ. ಡಿ.ಎಸ್.ಸುರೇಶ್ ವೀರಶೈವ ಲಿಂಗಾಯತ ಮತಗಳು ಹಾಗೂ ಅಭಿವೃದ್ಧಿ ಆಧಾರದಲ್ಲಿ ಬೇರೆ ಸಮುದಾಯದ ಮತಗಳನ್ನು ಸೆಳೆಯಲು ತಂತ್ರ ನಡೆಸುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಜಿ.ಶ್ರೀನಿವಾಸ್ ಕುರುಬ ಸಮುದಾಯದ ಮತಗಳು, ವೈಯಕ್ತಿಕ ಹಾಗೂ ಕಾಂಗ್ರೆಸ್ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. 2 ಬಾರಿ ಸೋಲು ಕಂಡಿರುವ ಗೋಪಿಕೃಷ್ಣ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂದೇ ಕ್ಷೇತ್ರದಲ್ಲಿ ಮತಯಾಚಿಸುತ್ತಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕೆಲವರು ಜತೆಯಾಗಿರುವುದು, ಅನುಕಂಪ, ಕ್ಷೇತ್ರದಲ್ಲಿ ಅಧಿಕಾರ ಇಲ್ಲದಿದ್ದರೂ ಮಾಡಿರುವ ಕೆಲಸವನ್ನು ಮುಂದಿಟ್ಟಿದ್ದಾರೆ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts