More

    ಮಂಡ್ಯದಲ್ಲಿ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು ಪ್ರಕರಣ: ಮೂರು ಇಲಾಖೆ ವಿರುದ್ಧ ಎಫ್ಐಆರ್ ದಾಖಲು

    ಮಂಡ್ಯ: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಯಿತು. ಮತ್ತೊಂದೆಡೆ ಕಾರಿನ ಮೇಲೆ ಮರ ಬಿದ್ದು ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಇಲಾಖೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
    ಜಿಲ್ಲಾಸ್ಪತ್ರೆ ರಸ್ತೆಯಲ್ಲಿನ ಶಿಲ್ಪಶ್ರೀ ನರ್ಸಿಂಗ್ ಹೋಂ ಬಳಿ ಕಾರಿನ ಮೇಲೆ ಮರವೊಂದು ಬುಡಸಹಿತ ಉರುಳಿ ಬಿದ್ದಿದ್ದರಿಂದ ಕಾರಿನಲ್ಲಿದ್ದ ಮಂಡ್ಯ ತಾಲೂಕು ಜಿ.ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್(27) ಮೃತಪಟ್ಟಿದ್ದನು. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಿಕೊಂಡು ವಾಪಾಸ್ಸಾಗುತ್ತಿದ್ದ ಕಾರ್ತಿಕ್, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತನ ಮಾರುತಿ ಓಮ್ನಿ ಕಾರಿನೊಳಗೆ ಕುಳಿತಿದ್ದನು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಬಿರುಗಾಳಿಯಿಂದಾಗಿ ಮರವೊಂದು ಬಿದ್ದು ಸ್ಥಳದಲ್ಲೇ ಮೃತಪಟ್ಟನು.
    ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ದೊಡ್ಡಪ್ಪನ ಮಗ ಮಹೇಶ್ ಪೂರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಇಲಾಖೆಗಳು ಸರಿಯಾದ ಜವಾಬ್ದಾರಿ ನಿರ್ವಹಣೆ ಮಾಡದ ಪರಿಣಾಮ ಇಂತಹ ಅವಘಡ ಸಂಭವಿಸಿದೆ. ನಗರಸಭೆ ಅಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ತನ್ನ ಸಹೋದರ ಮೃತಪಡುವಂತಾಯಿತು ಎಂದು ತಿಳಿಸಿದ್ದಾರೆ. ಇದರ ಆಧಾರದಲ್ಲಿ ಎಫ್ಐಆರ್ ಕೂಡ ದಾಖಲು ಮಾಡಲಾಗಿದೆ.

    ಮಂಡ್ಯದಲ್ಲಿ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು ಪ್ರಕರಣ: ಮೂರು ಇಲಾಖೆ ವಿರುದ್ಧ ಎಫ್ಐಆರ್ ದಾಖಲು

    ನೊಂದ ಕುಟುಂಬಕ್ಕೆ ಶಾಸಕ ರವಿಕುಮಾರ್ ಸಾಂತ್ವಾನ
    ಮಳೆಯಿಂದಾಗಿ ನಗರದಲ್ಲಿ ಹಾನಿ ಉಂಟಾದ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಮಂಗಳವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ನಷ್ಟ ಅನುಭವಿಸಿದವರಿಂದ ಮಾಹಿತಿ ಪಡೆದುಕೊಂಡರು. ಪ್ರಮುಖವಾಗಿ ಯುವಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ತೆರಳಿ ಕಾರ್ತಿಕ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಾತ್ರವಲ್ಲದೆ ವೈಯಕ್ತಿಕವಾಗಿ 1 ಲಕ್ಷ ರೂ ಪರಿಹಾರ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts