More

  ಕೊಡಗಿನಲ್ಲಿ ಆನ್‌ಲೈನ್ ವಂಚನೆ

  ಮಡಿಕೇರಿ:

  ಮನೆಯಲ್ಲಿ ನಗದು ಇಟ್ಟುಕೊಂಡರೆ ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್‌ಗಳಲ್ಲಿ ಇಡುವುದು ಈಗ ಸಾಮಾನ್ಯ. ಆದರೆ ಬ್ಯಾಂಕ್‌ಗಳು ಭೌತಿಕವಾಗಿ ಎಷ್ಟೇ ಭದ್ರತೆ ಒದಗಿಸಿದರೂ ಅಲ್ಲಿ ಕೂಡ ದುಡ್ಡು ಉಳಿಯುವುದಿಲ್ಲ ಎನ್ನುವುದನ್ನು ಆನ್‌ಲೈನ್ ವಂಚಕರು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ಬುದ್ಧಿವಂತಿಕೆಯಿಂದ ಹಣ ದೋಚಲಾಗುತ್ತಿದೆ. ಈ ತಿಂಗಳು ಕೇವಲ ೧೫ ದಿನಗಳಲ್ಲಿ ಇಂಥ ೪ ಪ್ರಕರಣಗಳು ಕೊಡಗು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.

  ಏ. ೨೨ಕ್ಕೆ ಮಡಿಕೇರಿ ನಗರದ ಕಾವೇರಿ ಲೇಔಟ್ ನಿವಾಸಿಯೊಬ್ಬರ ವಾಟ್ಸಪ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆಯೊಂದರಿಂದ ಲಿಂಕ್ ಒಂದನ್ನು ಕಳಿಸಿ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಮಾಡಿಕೊಳ್ಳುವ ಆಮಿಷ ತೋರಿಸಲಾಗುತ್ತದೆ. ಇದನ್ನು ನಂಬಿ ಏ. ೨೫ರಿಂದ ಹಂತ ಹಂತವಾಗಿ ಅಪರಿಚಿತ ವ್ಯಕ್ತಿ ಕಳುಹಿಸಿದ ಬ್ಯಾಂಕ್ ಅಕೌಂಟ್‌ಗೆ ಬರೋಬ್ಬರಿ ೫೨,೪೮,೩೦೯ ರೂ. ಹಣ ವರ್ಗಾ ಮಾಡಲಾಗುತ್ತದೆ. ಆದರೆ ಯಾವುದೇ ಲಾಭಾಂಶ ಸಿಗುವುದಿಲ್ಲ. ಇದನ್ನು ಕೇಳಿದರೆ ಮತ್ತೆ ೨೦ ಲಕ್ಷ ರೂ. ಹಣಕ್ಕೆ ಬೇಡಿಕೆ ಬರುತ್ತದೆ. ಆಗ ವಂಚನೆಗೆ ಒಳಗಾದ ಬಗ್ಗೆ ತಿಳಿದುಕೊಳ್ಳುವ ಮಡಿಕೇರಿ ನಿವಾಸಿ ಕೊಡಗು ಸೈಬರ್ ಅಪರಾಧ ಠಾಣೆಗೆ ಮೇ ೧೩ಕ್ಕೆ ದೂರು ದಾಖಲಿಸುತ್ತಾರೆ.

  ಮೇ ೮ಕ್ಕೆ ವಿರಾಜಪೇಟೆಯ ವಿಜಯನಗರ ನಿವಾಸಿಯೊಬ್ಬರ ಮೊಬೈಲ್ ವಾಟ್ಸಪ್ ನಂಬರ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಒಂದು ಫೈಲ್ ಬರುತ್ತದೆ. ನಂತರ ಇವರ ಅರಿವಿಗೆ ಬಾರದಂತೆ ಹಂತ ಹಂತವಾಗಿ ಒಟ್ಟು ೧,೮೫,೦೦೦ ಹಣ ಈ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ.

  ಮೇ ೪ಕ್ಕೆ ಮಡಿಕೇರಿ ತಾಲೂಕು ಮೇಕೇರಿ ಗ್ರಾಮದ ನಿವಾಸಿಯೊಬ್ಬರ ಮೊಬೈಲ್ ನಂಬರ್‌ಗೆ ಏರ್‌ಟೆಲ್ ಕಂಪನಿ ಹೆಸರಿನಲ್ಲಿ ಇ-ಸಿಮ್ ರಿಕ್ವೆಸ್ಟ್ ಬರುತ್ತದೆ. ಸ್ವಲ್ಪ ಸಮಯದ ನಂತರ ಸಿಂಗ್ ಹೆಸರಿನ ವ್ಯಕ್ತಿಯನ್ನು ಬೆನಿಫಿಷರಿಯಾಗಿ ಖಾತೆಗೆ ಸೇರ್ಪಡೆ ಮಾಡಲಾಗುತ್ತದೆ. ಇದಾದ ನಂತರ ಮೇಕೇರಿ ವ್ಯಕ್ತಿಯ ಅರಿವಿಗೆ ಬಾರದಂತೆ ಹಂತ ಹಂತವಾಗಿ ಒಟ್ಟು ೧,೦೦,೦೦೦ ರೂ. ಇವರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಕೊಳ್ಳಲಾಗಿದೆ.
  ಮಾರ್ಚ್ ೨೨ಕ್ಕೆ ಪೊನ್ನಂಪೇಟೆ ತಾಲೂಕು ಕೈಕೇರಿ ಗ್ರಾಮದ ನಿವಾಸಿ ಒಬ್ಬರ ಮೊಬೈಲ್ ನಂಬರ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಟ್ರಾವೆಲ್ ಏಜೆನ್ಸಿ ಏಜೆಂಟ್ ಎಂದು ಹೇಳಿ ರಿಯಾಯಿತಿ ದರದಲ್ಲಿ ಪ್ರವಾಸ ಮಾಡಬಹುದಾಗಿದೆ ಎಂದು ತಿಳಿಸಿ ಆಫರ್ ಬಗ್ಗೆ ದಾಖಲೆಗಳನ್ನು ಕಳುಹಿಸಿ ನಂಬಿಸಿದ್ದಾನೆ. ನಂತರ ೯೪,೦೦೦ ರೂ. ಹಣ ಆನ್ ಲೈನ್ ಮುಖಾಂತರ ಪಡೆದುಕೊಂಡು ವಂಚನೆ ಮಾಡಲಾಗಿದೆ. ಈ ಬಗ್ಗೆ ಮೇ. ೫ರಂದು ಕೊಡಗು ಸೈಬರ್ ಅಪರಾಧ ಠಾಣೆಗೆ ದೂರು ನೀಡಲಾಗಿದೆ.

  ಕೇವಲ ೧೫ ದಿನಗಳ ಅವಧಿಯಲ್ಲಿ ಕೊಡಗು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಇವು. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪ್ರಕರಣಗಳಲ್ಲಿ ಆನ್‌ಲೈನ್ ವಂಚಕರು ತಮ್ಮ ಚಾಣಾಕ್ಷತನದಿಂದ ದೊಡ್ಡ ಮೊತ್ತದ ಹಣ ದೋಚಿದ್ದಾರೆ. ವೇಗವಾಗಿ ಹಣ ಮಾಡುವ ದುರಾಸೆ ಹೊಂದಿರುವವರು ಮಾತ್ರವಲ್ಲದೆ ತಮ್ಮಲ್ಲಿರುವ ಮೊಬೈಲ್ ಮೂಲಕ ಏನು ನಡೆಯುತ್ತಿದೆ ಎನ್ನುವುದರ ಅರಿವು ಹೊಂದಿರದ ಅಮಾಯಕರೂ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಆನ್‌ಲೈನ್ ವಾಹನ ಮಾರಾಟದಲ್ಲಿ ವಂಚನೆ, ಲಾಟರಿ ಅಥವಾ ಬಹುಮಾನ ವಿಜೇತರಾಗಿರುವುದಾಗಿ ನಂಬಿಸಿ ವಂಚನೆ, ವಿವಿಧ ಸಂಸ್ಥೆಗಳ ಕಸ್ಟಮರ್ ಕೇರ್ ಸೆಂಟರ್ ಹೆಸರಿನಲ್ಲಿ ಹಣಕಾಸು ವಂಚನೆಗಳೂ ನಡೆಯುತ್ತಿದೆ.

  ಆನ್‌ಲೈನ್ ವಂಚಕರು ಜನಸಾಮಾನ್ಯರ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ವಿವರ ಸಂಗ್ರಹಿಸಿ ಕೊಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್‌ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್‌ಲೈನ್ ಆಟಗಳು, ಇ ಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ, ಹಣ ಕದಿಯುವುದು, ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಸೈಬರ್ ಅಪರಾಧದೊಳಗೆ ಬರುತ್ತದೆ ಎನ್ನುತ್ತಾರೆ ಪೊಲೀಸರು.
  ಮಾಹಿತಿ ಮತ್ತು ತಂತ್ರಜ್ಞಾನ ಇಂದು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

  ಹ್ಯಾಕರ್‌ಗಳು ಕೇವಲ ಹಣ ಗಳಿಸುವುದಕ್ಕಾಗಿ ಮಾಲ್ ವೇರ್, ವೈರಸ್ ಅಥವಾ ಟ್ರೊಜರ್‌ಗಳ ಮೂಲಕ ಕಂಪ್ಯೂಟರ್, ಮೊಬೈಲ್‌ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಿದ್ದಾರೆ. ನೇರವಾಗಿ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುತ್ತಿದ್ದಾರೆ.
  ವಾಟ್ಸಪ್ ಅಥವಾ ಇ-ಮೇಲ್‌ಗಳಿಗೆ ಪ್ರತಿದಿನ ಬರುವ ವಿಶ್ವಾಸಾರ್ಹವಲ್ಲದ ವಿವಿಧ ಲಿಂಕ್‌ಗಳನ್ನು ಓಪನ್ ಮಾಡದಿರುವುದರಿಂದ ಬಹುತೇಕ ಸೈಬರ್ ವಂಚನೆಗಳಿಂದ ಪಾರಾಗಬಹುದು. ಅಪರಿಚಿತ ವ್ಯಕ್ತಿಗಳು ಕಳಿಸುವ ಮೆಸೆಜ್‌ಗಳ ತಂಟೆಗೆ ಹೋಗದಿರುವುದೇ ಉತ್ತಮ. ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಎಷ್ಟು ಎಚ್ಚರ ವಹಿಸಿದರೂ ಸಾಲದು.

  ಸಾರ್ವಜನಿಕರು ಆನ್‌ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್‌ನ ಅಧಿಕೃತ ಅಪ್ಲಿಕೇಶನ್‌ಗಳನ್ನು ಬಳಸಬೇಕು. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಆನ್ ಲೈನ್ ಹಣ ವರ್ಗಾವಣೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ಸಮಸ್ಯೆ ಆದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳಬೇಕು.

  ಹಣಕಾಸು ಸಂಸ್ಥೆಗಳ ಅಥವಾ ಯು.ಪಿ.ಐ ಆಧಾರಿತ ಆನ್‌ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಕರೆಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್‌ಪೇ ಇತರೆ ಯು.ಪಿ.ಐ. ಆಧಾರಿತ ಆನ್‌ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್‌ಗಳ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಲು ಹೇಳಿ ಹಾಗೂ ಕೋಡ್‌ಗಳನ್ನು ಕೇಳಿಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡಬಾರದು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಿವಿಧ ರೀತಿಯಲ್ಲಿ ರಿಯಾಯಿತಿ, ಬಹುಮಾನ, ಉಡುಗೊರೆಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಈ ರೀತಿ ಅಪರಿಚಿತ ವ್ಯಕ್ತಿಗಳಿಗೆ ಹಣ ನೀಡಬಾರದು ಎನ್ನುವುದು ಸೈಬರ್ ಪೊಲಿಸರ ಸಲಹೆ.

  ಪ್ರತಿದಿನ ವಿವಿಧ ನಂಬಲಸಾಧ್ಯ ಮಾರ್ಗಗಳ ಮೂಲಕ ಸೈಬರ್ ವಂಚಕರು ಸಾರ್ವಜನಿಕರನ್ನು ಆನ್‌ಲೈನ್ ಮೂಲಕ ಹಣ ಪಡೆದುಕೊಂಡು ವಂಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಪರಿಚಿತ ಕರೆಗಳ ಬಗ್ಗೆ ಸೂಕ್ತ ನಿಗಾ ವಹಿಸಿಬೇಕು. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳ ಖಾತೆಗಳಿಗೆ ಹಣ ಪಾವತಿ ಮಾಡಿ ವಂಚನೆಗೆ ಒಳಗಾಗಬಾರದು. ಅಡ್ಡದಾರಿ ಮೂಲಕ ಲಾಭ ಗಳಿಸುವ ಆತುರದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ತಂದೆ-ತಾಯಿ ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳದೆ ಪರಿಶ್ರಮದಿಂದ ದುಡಿದು ನೇರವಾಗಿ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಬೇಕು.
  ಕೆ. ರಾಮರಾಜನ್, ಕೊಡಗು ಎಸ್‌ಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts