

ಕರೊನಾದಿಂದ ಜನಜೀವನ ಸ್ತಬ್ಧಗೊಂಡಿದೆ. ಸಭೆ- ಸಮಾರಂಭಗಳ, ವೈಭವ್ಯ ನಿಂತುಹೋಗಿದೆ. ಆದರೆ ಮಹಿಳೆಯರ ಮುಟ್ಟಿನ ಪ್ರಕ್ರಿಯೆಯೇನು ನಿಂತುಹೋಗಿಲ್ಲ. ಪ್ರತಿದಿನ ಸುಮಾರು 300 ಮಿಲಿಯನ್ ಮಹಿಳೆಯರು ಮುಟ್ಟಾಗುತ್ತಾರೆ. ಈ ಜೀವಸೃಷ್ಟಿಯ, ಹೆಣ್ತನದ ಎಲ್ಲ ಆಗುಹೋಗುಗಳ ಮೂಲಕ್ರಿಯೆಯೇ ಮುಟ್ಟು ಎನಿಸಿಕೊಂಡರೂ ಗರ್ಭಧಾರಣೆ ಮತ್ತು ತಾಯ್ತನಕ್ಕೆ ಸಿಗುವ ಪ್ರಾಮುಖ್ಯ, ವೈಭವೀಕರಣ ಈ ಮುಟ್ಟಿಗಿಲ್ಲ. ಬದಲಾಗಿ ಹಲವು ರೀತಿಯ ನಂಬಿಕೆ, ಮೌಢ್ಯ, ಸಾಂಪ್ರದಾಯಿಕ ಹಾಗೂ ಧಾರ್ವಿುಕ ನಂಬಿಕೆಗಳೊಡನೆ ತಳುಕು ಹಾಕಿಕೊಂಡಿದೆ.
ಸಂತಾನೋತ್ಪತ್ತಿ ವ್ಯವಸ್ಥೆಯ ಪ್ರಬುದ್ಧತೆಯನ್ನು ತಿಳಿಸುವ ಈ ಚಟುವಟಿಕೆಯ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿಕೊಂಡಿಲ್ಲ. ಸ್ವಚ್ಛತಾ ನಿಯಮಗಳನ್ನು ಕಾಪಾಡಿಕೊಳ್ಳದೆ ವಿಶ್ವದಾದ್ಯಂತ ಹಲವು ಮಹಿಳೆಯರು ಮುಟ್ಟಿನ ದಿನಗಳಲ್ಲಿ ಸಹಜವಾಗಿಯೇ ಆಗುವ ಹಾಮೋನುಗಳ ಬದಲಾವಣೆಯಿಂದ ಆಗುವ ಕಿಬ್ಬೊಟ್ಟೆ ನೋವು, ಸೊಂಟನೋವು ಇತ್ಯಾದಿಗಳ ಜೊತೆಗೆ ಪದೇಪದೆ ಮೂತ್ರಸೋಂಕು, ಜನನಾಂಗಗಳ ಸೋಂಕಿನಿಂದಾಗುವ ಹೊಟ್ಟೆನೋವು, ಬಿಳಿಮುಟ್ಟು, ನಂತರ ಬಂಜೆತನ ಇತ್ಯಾದಿ ಅನುಭವಿಸುತ್ತಾರೆ. ಜತೆಗೆ ಹ್ಯೂಮನ್ಪ್ಯಾಪಿಲೋಮವೈರಸ್ (ಹೆಚ್.ಪಿ.ವಿ) ಸೋಂಕಿನಿಂದ ಗರ್ಭಕೊರಳಿನ ಕ್ಯಾನ್ಸರ್, ದೀರ್ಘಾವಧಿ ನೋವು, ಅಸುರಕ್ಷಿತ ಪ್ಯಾಡ್ಬಳಕೆಯಿಂದ ಉಂಟಾಗುವ ಅಲರ್ಜಿ, ಅಂಡಾಶಯದ ಕ್ಯಾನ್ಸರ್, ಇತ್ಯಾದಿ ತೊಂದರೆಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಕೇವಲ ಸ್ವಚ್ಛತೆಯ ನಿಮಯಗಳನ್ನು ಪಾಲಿಸಿದರೆ ಶೇಕಡ 97ರಷ್ಟು ಸೋಂಕನ್ನು ತಡೆಗಟ್ಟಬಹುದು ಎಂಬ ಅರಿವೂ ಹೆಚ್ಚಿನವರಿಗಿಲ್ಲ. ಭಾರತದಲ್ಲಿ ನಡೆದ ಒಂದು ಸಮೀಕ್ಷೆ ಪ್ರಕಾರ ಶೇಕಡ 42ರಷ್ಟು ಮಹಿಳೆಯರಿಗೆ ಮುಟ್ಟಿನಸ್ರಾವ ಎಲ್ಲಿಂದ ಬರುತ್ತದೆ ಎಂಬುದೇ ತಿಳಿದಿಲ್ಲ. ಪ್ರಾಪ್ತವಯಸ್ಸಿನಲ್ಲಿ ಹೆಣ್ಣಿನ ದೇಹದಲ್ಲಿ ತಿಂಗಳಿಗೊಮ್ಮೆ ಅಂಡಾಣು ಬಿಡುಗಡೆಯಾಗಿ ಗರ್ಭನಾಳದಿಂದ ಸೆಳೆಯಲ್ಪಟ್ಟು ವೀರ್ಯಾಣುಗಾಗಿ ಕಾಯುತ್ತಿರುತ್ತದೆ. ಈ ಮಧ್ಯೆ ಗರ್ಭಕೋಶದ ಒಳಪದರ ಬೆಳದು ದಪ್ಪನೆಯ ಸ್ಪಂಜಿನ ಹಾಗಾಗಿ, ಅಂಡಾಣು ವೀರ್ಯಾಣು ಫಲಿತವಾದರೆ ಬೆಳೆಯುವ ಭ್ರೂಣಕ್ಕೆ ಇದು ಪೋಷಣೆ ನೀಡುತ್ತದೆ. ಹಾಗಾಗದಿದ್ದಲ್ಲಿ ಈ ಗರ್ಭಕೋಶದ ಒಳಪದರವೇ ಛಿದ್ರವಾಗಿ ಸಂಗ್ರಹವಾಗುವ ರಕ್ತದೊಂದಿಗೆ ಗರ್ಭದ್ವಾರ ಹಾಗೂ ಯೋನಿ ಮುಖಾಂತರ ಹೊರಬಂದು ಅದೇ ಮಾಸಿಕ ಮುಟ್ಟು ಅನಿಸಿಕೊಳ್ಳುತ್ತದೆ. ಇಂತಹ ಶುದ್ಧಾಂಗ ಸಹಜ ಜೈವಿಕ ಪ್ರಕ್ರಿಯೆಯನ್ನೇ ಹೆಚ್ಚಿನ ಮಹಿಳೆಯರು ಇಂದಿಗೂ ಬೇನೆ, ಶಾಪ, ಕೆಟ್ಟರಕ್ತ ಹೊರಬರುವುದು ಎಂದೆಲ್ಲ ತಪ್ಪಾಗಿ ತಿಳಿದುಕೊಂಡಿದ್ದಾರೆ.
ಶೇ.70ಕ್ಕೂ ಹೆಚ್ಚು ಹೆಣ್ಣುಮಕ್ಕಳು ಭಾರತದಲ್ಲಿ ಹಳೇಬಟ್ಟೆ ಇನ್ನಿತರ ವಸ್ತುಗಳನ್ನು ಮುಟ್ಟಿನ ಸಮಯದಲ್ಲಿ ಉಪಯೋಗಿಸುತ್ತಿದ್ದಾರೆ. ಇವೆಲ್ಲದರ ಬಗ್ಗೆ ಅದರಲ್ಲೂ ಮುಟ್ಟಿನ ನೈರ್ಮಲ್ಯತೆ ಬಗ್ಗೆ ಅರಿವು ಮೂಡಿಸಲು 2014ರಿಂದ ಮೇ 28ರಂದು ಪ್ರತಿವರ್ಷವೂ ವಿಶ್ವದಾದ್ಯಂತ ‘ಮುಟ್ಟಿನ ನೈರ್ಮಲ್ಯ ದಿನ’ ಆಚರಿಸಲಾಗುತ್ತಿದೆ. ಕರೊನಾ ಕಾಲದಲ್ಲಂತೂ ಶಾಲಾ-ಕಾಲೇಜುಗಳಲ್ಲಿ ಮುಟ್ಟಿನ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಮಾಹಿತಿ ದೊರಕುವುದು ಕಡಿಮೆಯಾಗಿ, ಆರೋಗ್ಯ ಸೇವಾಸೌಲಭ್ಯವೂ ಕಡಿಮೆಯಾಗಿ ತಂತ್ರಜ್ಞಾನದ ಮಾಹಿತಿ ಕೊರತೆಯು ಕಾಡುತ್ತಿದೆ. ಸಲಹೆ ಸ್ವೀಕರಿಸಲು ಸಕಾಲವಾದ ಹದಿವಯಸ್ಸಿನಲ್ಲಿ ಈ ಸಂದರ್ಭದಲ್ಲೂ ಸಾರ್ವಜನಿಕವಾಗಿ ಸೇರಲು ಸಾಧ್ಯವಿಲ್ಲದಿರುವುದರಿಂದ ಸಾಧ್ಯವಾದಷ್ಟು ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಬೇಕು. ಮುಟ್ಟಿನ ಪ್ರಕ್ರಿಯೆ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿ ಮನೆಯಲ್ಲೇ ಉಪಯೋಗಿಸಬಹುದಾದ ಸಾಧನಗಳ ಬಗ್ಗೆ ತಿಳಿಹೇಳಬೇಕು. ಸ್ವಚ್ಛವಾದ ಒಣಗಿದ, ಮೆತ್ತಗಿನ ಸ್ರಾವಹೀರಬಲ್ಲಂತಹ ಬಟ್ಟೆ ಉಪಯೋಗಿಸಿ ತಣ್ಣೀರಿನಲ್ಲಿ ಸೋಪು ಹಾಕಿ ತೊಳೆದು ಬಿಸಿಲಲ್ಲಿ ಒಣಗಿಸಿ, ಇಸ್ತ್ರಿಮಾಡಿ, ನಿರ್ದಿಷ್ಟ ಜಾಗದಲ್ಲಿಟ್ಟು ಪ್ರತಿಬಾರಿಯೂ ಮುಟ್ಟಾದಾಗ ಉಪಯೋಗಿಸಿ ಬಟ್ಟೆ ಹಾಳಾದಾಗ ವಿಲೇವಾರಿ ಮಾಡಬಹುದು. ಇದಕ್ಕೆ ಸಹನೆ, ತಾಳ್ಮೆ ಅಗತ್ಯ. ಬಳಸಿ ಬಿಸಾಡುವ ನ್ಯಾಪ್ಕಿನ್ ಪರಿಸರಸ್ನೇಹಿ ಆಗಿದ್ದರೆ ಒಳ್ಳೆಯದು.
(ಲೇಖಕರು ಸ್ತ್ರೀರೋಗತಜ್ಞೆ)