

ಚೆನ್ನೈ: ಡಬಲ್ ಮರ್ಡರ್ ಆರೋಪಿಯನ್ನು ಹಿಡಿಯಲು ಹೋಗಿದ್ದ ವಿಶೇಷ ಪೊಲೀಸ್ ತಂಡದ ಮೇಲೆ ಆರೋಪಿ ದೇಸಿ ಬಾಂಬ್ ದಾಳಿ ನಡೆಸಿದ ಪರಿಣಾಮ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲಿಯ ಮನಕ್ಕರೈನಲ್ಲಿ ನಡೆದಿದೆ.
ಆರೋಪಿ ಪೊಲೀಸ್ ತಂಡದ ಮೇಲೆ ಎರಡು ಬಾಂಬ್ಗಳನ್ನು ಎಸೆದಿದ್ದು, ಅದರಲ್ಲಿ ಎರಡನೇ ಬಾಂಬ್ ಸ್ಪೋಟಗೊಂಡಿದ್ದರಿಂದ ಕಾನ್ಸ್ಟೇಬಲ್ ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸುಬ್ರಮಣಿಯಂ ಎಂದು ಗುರುತಿಸಲಾಗಿದೆ. ಅಜವರ್ತಿರುನಗರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಮಣಿಯಂ ಇಂದು (ಮಂಗಳವಾರ) ಸಾವಿಗೀಡಾಗಿದ್ದಾರೆ. ಮೃತರು ಪತ್ನಿ ಹಾಗೂ 6 ತಿಂಗಳ ಮಗುವನ್ನು ಅಗಲಿದ್ದಾರೆ.
ಆರೋಪಿಯು ಮೃತ
ಮೇಲಮಂಗಲಕುರಿಚಿ ಮೂಲದ ಆರೋಪಿ ದೊರೈ ಮುತ್ತು ಬಾಂಬ್ ಎಸೆಯುವಾಗ ಕೈಯಲ್ಲೇ ಬಾಂಬ್ ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದ. ಆತನನ್ನು ಸಮೀಪದ ತಿರುನಲ್ವೇಲಿ ಆಸ್ಪತ್ರೆಗೆ ಸಾಗಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ದೊರೈ ಮುತ್ತುವಿನ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಆತ ಕಟ್ಟಡವೊಂದರಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ, ಆತನನ್ನು ಪೊಲೀಸರು ಬೆನ್ನಟ್ಟಿದಾಗ ಬಾಂಬ್ ದಾಳಿ ನಡೆಸಿದ್ದಾನೆ.
ಪರಿಹಾರ ಘೋಷಣೆ
ಮಂಗಳವಾರ ಸಂಜೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪೊಲೀಸ್ ಕಾನ್ಸ್ಟೇಬಲ್ ಸಾವಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಕುಟುಂಬದ ಸದಸ್ಯರಿಗೆ ಉದ್ಯೋಗ ಭರವಸೆಯನ್ನು ನೀಡಿದ್ದಾರೆ. (ಏಜೆನ್ಸೀಸ್)