'ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ' : ಟಿಎಂಸಿ ತಕರಾರು

up
Published on

ಕೊಲ್ಕತಾ : ಇನ್ನು ಮೂರು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲಿದ್ದು, ರಾಜ್ಯದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಳ ನಡುವೆ ಭಾರೀ ಹಣಾಹಣಿ ನಡೆಯುವ ಸಾಧ್ಯತೆಯಿದೆ. ತನ್ನ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವ ಟಿಎಂಸಿ, ಇದೀಗ ಚುನಾವಣಾ ಆಯೋಗಕ್ಕೆ ವಿಚಿತ್ರ ದೂರೊಂದನ್ನು ನೀಡಿದೆ.

ಇತ್ತೀಚೆಗಷ್ಟೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಟಿಎಂಸಿ ಸಂಸದ ಡೆರಿಕ್ ಒ ಬ್ರೇನ್ ಬಿಜೆಪಿ ಆಡಳಿತ ಇರುವ ರಾಜ್ಯಗಳಿಂದ ಚುನಾವಣಾ ಕರ್ತವ್ಯ(ಎಲೆಕ್ಷನ್ ಡ್ಯೂಟಿ)ಕ್ಕೆ ಪೊಲೀಸರನ್ನು ನೇಮಿಸುವ ಬಗ್ಗೆ ತಕರಾರೆತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಬ್ರೇನ್, "ಬಿಜೆಪಿ ಆಳ್ವಿಕೆ ಇರುವ ಉತ್ತರ ಪ್ರದೇಶ(ಯುಪಿ) ಮತ್ತು /ಅಥವಾ ಇತರ ಯಾವುದೇ ರಾಜ್ಯಗಳ ಸ್ಟೇಟ್ ಆರ್ಮಡ್​ ಪೊಲೀಸ್(ಎಸ್ಎಪಿ)ಯನ್ನು ಪಶ್ಚಿಮ ಬಂಗಾಳದಲ್ಲಿ ನಿಯುಕ್ತಿಗೊಳಿಸುವುದನ್ನು ತಕ್ಷಣ ನಿಲ್ಲಿಸಬೇಕು" ಎಂದು ಮನವಿ ಮಾಡಿದ್ದಾರೆ.

ಚುನಾವಣಾ ಸಮಯದಲ್ಲಿ ಸಂಬಂಧಿತ ರಾಜ್ಯದ ಲಾ ಅಂಡ್ ಆರ್ಡರ್ ವ್ಯವಸ್ಥೆಯನ್ನು ಆಯೋಗವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸಾಮಾನ್ಯ ವಿಷಯ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯಗಳ ಭದ್ರತಾ ಪಡೆಗಳನ್ನು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಷ್ಪಕ್ಷಪಾತವಾಗಿ-ಶಾಂತಿಯುತವಾಗಿ ಚುನಾವಣೆ ನಡೆಸುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ ಬಂಗಾಳದಲ್ಲಿ ಉತ್ತರ ಪ್ರದೇಶದ ಎಸ್​ಎಪಿಯ 30 ಕಂಪೆನಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎನ್ನಲಾಗಿದೆ.

"ಬಿಜೆಪಿ ಆಳ್ವಿಕೆಯಿಲ್ಲದ ರಾಜ್ಯಗಳಿಂದ ಎಸ್​ಎಪಿ ನಿಯುಕ್ತಿಗೊಳಿಸುವ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ ಯುಪಿಯ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಸ್ಟಾರ್ ಕಾಂಪೇನರ್ ಆಗಿರುವುದರಿಂದ ಮತ್ತು ಅಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಆ ರಾಜ್ಯದ ಎಸ್​ಎಪಿ ನಿಯುಕ್ತಿ ಮಾಡಬೇಡಿ. ಇದರಿಂದ ಚುನಾವಣೆಯಲ್ಲಿ ಸಮಾನ ಅವಕಾಶ ಮತ್ತು ನಿಷ್ಪಕ್ಷಪಾತತೆಗೆ ಧಕ್ಕೆ ಬರಲಿದ್ದು, ಅವರು ಬಿಜೆಪಿ ಪರವಾಗಿ ಪಕ್ಷಪಾತ ಭಾವ ಹೊಂದಿರುತ್ತಾರೆ ಎಂದು ನಮಗೆ ಅನುಮಾನವಿದೆ" ಎಂದು ಬ್ರೇನ್ ಪತ್ರದಲ್ಲಿ ಬರೆದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net