ಪಶ್ಚಿಮ ಬಂಗಾಳದಲ್ಲಿ ಬಡಿದಾಡಿಕೊಂಡ ಬಿಜೆಪಿ, ಟಿಎಂಸಿ ಕಾರ್ಯಕರ್ತರು; ವಾಹನಗಳೆಲ್ಲ ಧ್ವಂಸ

Protest
Published on

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ, ರಾಜಕೀಯ ಪಕ್ಷಗಳ ನಡುವಿನ ಹೊಡೆದಾಟ ಹೊಸದಲ್ಲ.

ಇಂದು ಮತ್ತೆ ಅದು ಪುನರಾವರ್ತನೆಗೊಂಡಿದೆ. ಅಂಫಾನ್​ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಪರಿಹಾರ ವಿತರಣೆ ಮಾಡುವಾಗ ಗೋಲ್​ಮಾಲ್​ ಆಗಿದೆ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇಂದು ಪಶ್ಚಿಮ ಬಂಗಾಳದ 24 ಪರಗಣ ಏರಿಯಾದಲ್ಲಿ ನಡೆದ ಪ್ರತಿಭಟನೆ ವೇಳೆ, ಬಿಜೆಪಿ ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದಾರೆ.

ಅಂಫಾನ್​ ಚಂಡಮಾರುತದಿಂದ ತೊಂದರೆಗೊಳಗಾದವರಿಗೆ ನೆರವು ನೀಡುವಾಗ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ, ಅಟ್ಯಾಕ್​ ಮಾಡಿದ್ದಾರೆಂದು ಹೇಳಲಾಗಿದೆ. ಪೊಲೀಸರೂ ಕೂಡ ನಮ್ಮನ್ನು ಹಿಂಸಿಸಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದಾರೆ.

ಟಿಎಂಸಿ ಗೂಂಡಾಗಳ ಹಲ್ಲೆಯಿಂದ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರ ಮೊಬೈಲ್​ ಫೋನ್​​​ಗಳನ್ನು ಕಿತ್ತುಕೊಂಡಿದ್ದಾರೆ​, ವಾಹನಗಳನ್ನೆಲ್ಲ ಧ್ವಂಸ ಮಾಡಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬರಕ್​ಪುರ ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ಗೆ ಬೆದರಿಕೆ: ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಕರೆ

ಟಿಎಂಸಿ ಗೂಂಡಾಗಳು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ನಾವು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಕಚ್ಚಾ ಬಾಂಬ್​ ಎಸೆದಿದ್ದಾರೆ ಎಂದೂ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದ ತೀವ್ರ ಹಾನಿಯಾಗಿದೆ. ಆದರೆ ಅದರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ರಾಜ್ಯಸರ್ಕಾರ ಗೋಲ್​ಮಾಲ್​ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಅನೇಕರಿಗೆ ಯಾವುದೇ ಹಾನಿಯಾಗದೆ ಇದ್ದರೂ ಪರಿಹಾರ ಧನ ನೀಡಲಾಗಿದೆ. ಮತ್ತೆ ಹಲವರು ನಿಜವಾಗಿಯೂ ಚಂಡಮಾರುತದಿಂದ ಅಪಾರ ಹಾನಿಗೆ ಒಳಗಾಗಿದ್ದರೂ ನೆರವು ಸಿಗಲಿಲ್ಲ ಎಂಬುದು ಬಿಜೆಪಿಯ ಆರೋಪ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net