

ತಿರುಮಲ: ಸುಮಾರು ಎರಡೂವರೆ ತಿಂಗಳಿನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಳಿದ ದೇವಾಲಯಗಳಂತೆ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯವೂ ತೆರೆದಿರಲಿಲ್ಲ.
ಜಗತ್ತಿನ ಅತ್ಯಂತ ಶ್ರೀಮಂತ ದೇವರುಗಳಲ್ಲಿ ಒಂದು ಎನಿಸಿರುವ ಈ ದೇವಾಲಯ ತೆರೆಯದ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟದಿಂದ ಆರ್ಥಿಕ ಸಂದಷ್ಟ ಎದುರಿಸಿತ್ತು.
ಈ ದೇವಾಲಯವನ್ನು ಜೂನ್ 11ರಿಂದ ಮತ್ತೆ ತೆರಯಲಾಗಿದೆ. ದೇವಾಲಯ ತೆರೆದು ಇದೆರಡೇ ವಾರದಲ್ಲಿ 7.5 ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಿಸಿದೆ. ಇದರಲ್ಲಿ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳ ಮೌಲ್ಯವು ಸೇರಿಲ್ಲ. ಈ ವಸ್ತುಗಳು ಕೂಡ ಅಪಾರ ಪ್ರಮಾಣದಲ್ಲಿ ಕಾಣಿಕೆ ರೂಪದಲ್ಲಿ ಬಂದಿದ್ದು, ಅದನ್ನೂ ಸೇರಿಸಿದರೆ ಆದಾಯ ಇನ್ನಷ್ಟು ಹೆಚ್ಚಳವಾಗಲಿದೆ.
ಲಾಕ್ ಡೌನ್ ಅವಧಿಯಲ್ಲಿ ದೇವಸ್ಥಾನ ಬಂದ್ ಆಗಿದ್ದರಿಂದ ಸುಮಾರು ಐನೂರು ಕೋಟಿ ರೂಪಾಯಿ ಟಿಟಿಡಿಗೆ ನಷ್ಟವಾಗಿತ್ತು. ಇದೀಗ ಎರಡೇ ವಾರದಲ್ಲಿ ಏಳೂವರೆ ಕೋಟಿ ರೂಪಾಯಿ ಬಂದಿದೆ ಎಂಬ ಮಾಹಿತಿಯನ್ನು ಅದು ನೀಡಿದೆ.
ಹುಂಡಿಯಲ್ಲಿ ಆರು ಕೋಟಿ ಸಂಗ್ರಹವಾಗಿದೆ. ಆನ್‌ಲೈನ್ ಟಿಕೆಟ್‌ನಿಂದ 1.5 ಕೋಟಿ ರೂಪಾಯಿ ಆದಾಯ ಬಂದಿದೆ. ಮುನ್ನೂರು ರೂಪಾಯಿಯನ್ನು ಆನ್‌ಲೈನ್ ದರ್ಶನಕ್ಕೆ ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರೊನಾ ವೈರಸ್ ಭಯದ ಹಿನ್ನೆಲೆಯಲ್ಲಿ ದೇವಸ್ಥಾನ ಪುನರಾರಂಭಗೊಂಡ ಮೊದಲಿನಲ್ಲಿ ಆರು ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈಗ ಮುನ್ನೂರು ರೂಪಾಯಿಯ ಟಿಕೆಟ್ ಹೊಂದಿರುವ ಆರು ಸಾವಿರ ಭಕ್ತರಿಗೆ ಮತ್ತು ಮೂರು ಸಾವಿರ ಭಕ್ತರಿಗೆ ಧರ್ಮದರ್ಶನದ ಮೂಲಕ, ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ"ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
"ಲಾಕ್ ಡೌನ್ ತೆರವುಗೊಂಡ ನಂತರ ಇದುವರೆಗೆ ಸುಮಾರು 25 ಸಾವಿರ ಭಕ್ತರು ಮುಡಿ ಅರ್ಪಿಸಿದ್ದಾರೆ. ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ" ಎಂದು ಅವರು ವಿವರಿಸಿದರು. (ಏಜೆನ್ಸೀಸ್)