

ಬೆಂಗಳೂರು: ರಾಜ್ಯ ಸರ್ಕಾರ ದೇಶ-ವಿದೇಶಗಳಿಂದ ಹೂಡಿಕೆದಾರರನ್ನು ಆಕರ್ಷಿಸಲು, ಅವರು ಇಲ್ಲಿ ಕಂಪನಿ ತೆರೆಯುವಂತೆ ಮಾಡಲು ಅನೇಕ ಯೋಜನೆ-ಯೋಚನೆಗಳನ್ನು ಹಾಕಿಕೊಳ್ಳುತ್ತಿದೆ. ಮತ್ತೊಂದೆಡೆ ಸರ್ಕಾರಿ ಕಚೇರಿಗಳ ಅವ್ಯವಸ್ಥೆ, ಅಧಿಕಾರಿಗಳ ಧೋರಣೆಗಳಿಂದ ಸರ್ಕಾರದ ಇಂಥ ಪ್ರಯತ್ನಕ್ಕೆ ಹಿನ್ನಡೆ ಆಗುತ್ತಿದೆ.
ಅಂಥ ಪ್ರಕರಣಗಳಿಗೆ ತಾಜಾ ಉದಾಹರಣೆ ಎಂಬಂಥ ಈ ಸಂಗತಿಯೊಂದು ಬಹಿರಂಗಗೊಂಡಿದೆ. ಬೆಂಗಳೂರಿನಲ್ಲಿರುವ ಉದ್ಯಮಿಯೊಬ್ಬರು ಎರಡು ತಿಂಗಳಾದರೂ ಕಂಪನಿಯೊಂದನ್ನು ನೋಂದಣಿ ಮಾಡಿಸಿಕೊಳ್ಳಲಾಗದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಸಿಂಗ್ ಎಂಬ ಈ ಉದ್ಯಮಿ ತಂತ್ರಜ್ಞಾನ ಮತ್ತು ವಾಣಿಜ್ಯ ಕ್ಷೇತ್ರದಲ್ಲಿದ್ದು, ಭಾರತ ಹಾಗೂ ಅಮೆರಿಕ ಎರಡೂ ಕಡೆ ಕೆಲಸ ಮಾಡುತ್ತಿರುವುದು ಅವರ ಲಿಂಕ್ಡ್ಇನ್ ಪ್ರೊಫೈಲ್ನಿಂದ ತಿಳಿದುಬಂದಿದೆ. ಇವರು ತಮ್ಮ ಇತ್ತೀಚಿನ ಸಮಸ್ಯೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಬೆಂಗಳೂರು/ಭಾರತವನ್ನು ಪ್ರೀತಿಸುತ್ತೇನೆ. ಆದರೆ ಭಾರತದಲ್ಲಿ ಕಂಪನಿಯೊಂದನ್ನು ನೋಂದಣಿ ಮಾಡಿಸಿಕೊಳ್ಳಲು 2 ತಿಂಗಳು ಕಳೆದರೂ ಇನ್ನೂ ಸಾಧ್ಯವಾಗಿಲ್ಲ. ನಾನು ಯುಎಸ್ಗೆ ಹಿಂದಿರುಗುವ ಸಮಯ ಬರಬಹುದು ಎಂಬುದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.