

ಬೀಜಿಂಗ್: ವಿನಾಶಕಾಲೆ ವಿಪರೀತ ಬುದ್ಧಿ ಎನ್ನುವಂತೆ ಚೀನಾಕ್ಕೀಗ ಹೊರ ದೇಶಗಳಿಂದ ಮಾತ್ರವಲ್ಲದೇ ಆಂತರಿಕವಾಗಿಯೇ ಪೆಟ್ಟು ಬೀಳಲು ಶುರುವಾಗಿದೆ. ಇಡೀ ವಿಶ್ವಕ್ಕೆ ಕರೊನಾ ವೈರಸ್ ಎಂಬ ಮಹಾಮಾರಿಯನ್ನು ಕೊಟ್ಟಿರುವ ಈ ದೇಶಕ್ಕೀಗ ಎಲ್ಲೆಡೆಯಿಂದಲೂ ಪೆಟ್ಟು ಬೀಳಲು ಶುರುವಾಗಿದೆ.
ಭಾರತದ ಜತೆ ಗಡಿ ಸಂಘರ್ಷಕ್ಕೆ ಇಳಿದು, ಭಾರತದಲ್ಲಿನ ತನ್ನ ಕೋಟ್ಯಂತರ ಲಕ್ಷ ರೂಪಾಯಿಗಳ ವಹಿವಾಟಿಗೆ ಕತ್ತರಿ ಹಾಕಿಸಿಕೊಂಡಿರುವ ಚೀನಾ ಇದೀಗ ತನ್ನದೇ ಭಾಗವಾಗಿರುವ ಹಾಂಗ್‌ಕಾಂಗ್‌ನಿಂದ ಮುಖಭಂಗ ಅನುಭವಿಸುತ್ತಿದೆ.
ಬೈಟ್ ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಅಪ್ಲಿಕೇಷನ್‌ನನ್ನು ನಿಷೇಧ ಮಾಡಲು ಹಾಂಗ್‌ಕಾಂಗ್ ನಿರ್ಧರಿಸಿದೆ. ಈ ಆ್ಯಪ್ ಅನ್ನು ತನ್ನ ದೇಶದಲ್ಲಿ ಬಳಸದೇ ಬೇರೆ ದೇಶದವರನ್ನು ಹಾಳು ಮಾಡುವಲ್ಲಿ ಯಶಸ್ವಿಯಾಗಿದ್ದ ಚೀನಾಕ್ಕೆ ಇದೀಗ ಈ ಮೂಲಕ ಮತ್ತೊಂದು ಆಘಾತ ಎದುರಾಗಿದೆ.
ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತಂದಿರುವ ಚೀನಾದ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿರುವ ಹಾಂಗ್‌ಕಾಂಗ್ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ದೇಶದ ಆಗುಹೋಗುಗಳಲ್ಲಿ ವಿದೇಶಿಗರ ಹಸ್ತಕ್ಷೇಪವನ್ನು ತಡೆಯುವ ಸಂಬಂಧ ಇಂಥದ್ದೊಂದು ಕಾನೂನು ಜಾರಿಗೆ ಮಾಡಿರುವ ಚೀನಾದ ಕ್ರಮದಿಂದಾಗಿ ಹಾಂಗ್‌ಕಾಂಗ್ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಟಿಕ್‌ಟಾಕ್ ಬ್ಯಾನ್‌ಗೆ ಮುಂದಾಗಿದೆ.
ಟಿಕ್‌ಟಾಕ್ ತಮ್ಮ ಎಲ್ಲಾ ವೈಯಕ್ತಿಕ ಡಾಟಾಗಳನ್ನು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಚೀನಾದ ಯಾವುದೇ ಅಪ್ಲಿಕೇಷನ್‌ಗಳು ತಮಗೆ ಬೇಡ ಎಂದಿದೆ.