ಕುರೂಪಿ, ಅಂಗವಿಕಲರಿಗಿಲ್ಲ ಟಿಕ್​ಟಾಕ್​ನಲ್ಲಿ ಅವಕಾಶ; ಸುಂದರವಿಲ್ಲದವರ ಅಕೌಂಟ್​ ಡಿಲೀಟ್​?!

tiltok
Published on

ನವದೆಹಲಿ: ಮನೋರಂಜನೆಗಾಗಿ ಇರುವ ಟಿಕ್​ಟಾಕ್​ ಆ್ಯಪ್​ ಜಗತ್ತಿನ ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಸೌಂದರ್ಯ, ಅಂಗವೈಕಲ್ಯ ಎಲ್ಲವನ್ನೂ ಮೀರಿ ಇಲ್ಲಿ ಪ್ರತಿಭೆ ಬೆಳೆಯುತ್ತಿದೆ. ಆದರೆ ಇದೀಗ ಟಿಕ್​ಟಾಕ್​ ತನ್ನ ಆ್ಯಪ್​ನಲ್ಲಿ ಸೌಂದರ್ಯವಂತರಿಗೆ ಮಾತ್ರ ಅವಕಾಶ ಎಂದಿದ್ದು, ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಟಿಕ್​ಟಾಕ್​ ತನ್ನ ಕಂಟೆಂಟ್​ ಮಾಡರೇಟರ್​ಗಳಿಗೆ ನಿರ್ದೇಶನವೊಂದನ್ನು ನೀಡಿದೆ. ಟಿಕ್​ಟಾಕ್​ನಲ್ಲಿ ಯಾರು ಚೆನ್ನಾಗಿರುವುದಿಲ್ಲವೋ ಅವರ ಅಕೌಂಟ್​ಗಳನ್ನು ತೆಗೆದುಹಾಕಿ ಎಂದು ಹೇಳಿದೆ. ಟಿಕ್​ಟಾಕ್​ನ ಪ್ರಕಾರ ತೆಳ್ಳಗಿರುವವರು, ಬೊಜ್ಜು ಇರುವವರು, ಸುಂದರವಾದ ಮುಖ ಇಲ್ಲದವರು, ಸುಕ್ಕುಗಳಿರುವವರು, ಕಣ್ಣಿನಲ್ಲಿ ತೊಂದರೆ ಇರುವವರು, ಅಂಗವಿಕಲರು ತಮ್ಮ ಆ್ಯಪ್​ನಿಂದ ದೂರಾಗಬೇಕಂತೆ. ಹಾಗಾಗಿ ಅಂಥವರನ್ನು ಹುಡುಕಿ ಅವರ ಅಕೌಂಟ್​ಗಳನ್ನು ತೆಗೆದುಹಾಕಿ ಎಂದು ನಿರ್ದೇಶಿಸಿದೆ.

ಅದರ ಜತೆಯಲ್ಲಿ ವಿಡಿಯೋಗಳಲ್ಲೂ ಸಹ ಕೆಲವು ಕಡಿವಾಣಗಳನ್ನು ಹಾಕಲಾಗಿದೆ. ಸ್ಲಂಗಳು, ಹಳೆಯ ಮನೆಗಳು ಹಾಗೂ ಕೊಳಕು ಜಾಗಗಳಲ್ಲಿ ಚಿತ್ರಿತವಾಗಿರುವ ವಿಡಿಯೋಗಳನ್ನು ತೆಗೆದುಹಾಕುವಂತೆ ಹೇಳಲಾಗಿದೆ. ಸ್ವಚ್ಛ ಪರಿಸರದಲ್ಲಿ ಚಿತ್ರಿತವಾಗಿರುವ ವಿಡಿಯೋಗಳಿಗೆ ಮಾತ್ರವೇ ಅವಕಾಶ ನೀಡುವಂತೆ ತಿಳಿಸಲಾಗಿದೆ.

ಆದರೆ ಟಿಕ್​ಟಾಕ್​ ಸಂಸ್ಥೆಯ ವಕ್ತಾರರು ಈ ನಿರ್ದೇಶನವನ್ನು ತಾವು ಈಗ ಅನುಸರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇಂತದ್ದೊಂದು ನಿರ್ದೇಶನ ಮೊದಲು ಇತ್ತು, ಆದರೆ ನಂತರ ಅದನ್ನು ತೆಗೆದುಹಾಕಲಾಯಿತು ಎಂದು ಅವರು ತಿಳಿಸಿದ್ದಾರೆ. ಸದ್ಯ ಟಿಕ್​ಟಾಕ್​ನ ಈ ನಿರ್ದೇಶನದ ಕುರಿತಾಗಿ ಚರ್ಚೆ ನಡೆಯುತ್ತಿದ್ದು, ಸಂಸ್ಥೆಯ ಬಗ್ಗೆ ಸಾಕಷ್ಟು ಜನರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net