

Thug Life: ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಕೇವಲ ಅವರಿಗೆ ಮಾತ್ರವಲ್ಲದೇ ಅವರು ಅಭಿನಯದ ಚಿತ್ರಕ್ಕೂ ಭಾರೀ ಮುಖಭಂಗವನ್ನೇ ಉಂಟುಮಾಡಿತು ಎಂಬುದಕ್ಕೆ ಥಗ್ ಲೈಫ್ ಹೀನಾಯ ಸೋಲೇ ಜ್ವಲಂತ ಸಾಕ್ಷಿ. ಚಿತ್ರಮಂದಿರಗಳಲ್ಲಿ ತೆರೆಕಂಡು 8 ವಾರಗಳನ್ನೂ ಪೂರೈಸದ ಚಿತ್ರ ಇದೀಗ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ ಆದ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗ್ತಿರುವ ವಿಚಾರ ಸದ್ಯ ಚಿತ್ರತಂಡಕ್ಕೆ ಮತ್ತೊಂದು ಆಘಾತ ತಂದೊಡ್ಡಿದೆ.
37 ವರ್ಷಗಳ ಬಳಿಕ ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ ಮೂಡಿಬಂದ 'ಥಗ್ ಲೈಫ್' ಖಂಡಿತ ಸೂಪರ್ ಹಿಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ದೊಡ್ಡ ವಿವಾದ ಹಾಗೂ ಚಿತ್ರದಲ್ಲಿ ಮನರಂಜನಾ ಅಂಶಗಳಿಲ್ಲದ ಕಾರಣ ಥಗ್ ಲೈಫ್ ಸದ್ಯ ಸಿನಿರಸಿಕರ ಮೆಚ್ಚುಗೆ, ಪ್ರಶಂಸೆಯಿಂದ ದೂರ ಉಳಿದು ಫ್ಲಾಪ್ ಎಂಬ ಹಣೆಪಟ್ಟಿ ಹೊತ್ತು ತಿರುಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸಿದ ಬಹುನಿರೀಕ್ಷಿತ ಚಿತ್ರದ ಕುರಿತು ಇಲ್ಲಿಯವರೆಗೆ ಎಲ್ಲಿಯೂ ಮಾತನಾಡದ ಮಣಿರತ್ನಂ, ಇತ್ತೀಚೆಗಷ್ಟೇ ಈ ಕುರಿತಂತೆ ಮೌನ ಮುರಿದರು.
ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರೇಕ್ಷಕರಿಲ್ಲದೆ ಭಾರೀ ಮುಖಭಂಗ ಅನುಭವಿಸಿದ 'ಥಗ್ ಲೈಫ್', ಇದೀಗ ಬಾಕ್ಸ್ ಆಫೀಸ್ನಲ್ಲಿ ಭಾರೀ ನಷ್ಟವನ್ನು ಎದುರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಸರಾಂತ ಒಟಿಟಿ ಪ್ಲಾಟ್ಫಾರ್ಮ್ ಮೊರೆ ಹೋದ ಚಿತ್ರತಂಡ, ತಮ್ಮ ಚಿತ್ರವನ್ನು ನೆಟ್ಫ್ಲಿಕ್ಸ್ಗೆ ಮಾರಾಟ ಮಾಡಲು ಮುಂದಾಯಿತು. ಇದಕ್ಕಾಗಿ ಮಾತುಕತೆ ಕೂಡ ನಡೆಸಿತು. ಆದರೆ, ಮೊದಲ ಹಂತದ ಮಾತುಕತೆ ಗಿಟ್ಟಲಿಲ್ಲ. 130 ಕೋಟಿ ರೂ. ಕೊಟ್ಟು ಖರೀದಿಸಲು ನೆಟ್ಫ್ಲಿಕ್ಸ್ ಒಪ್ಪಲಿಲ್ಲ. ರಿಲೀಸ್ ಆಗಿ 8 ವಾರಗಳು ಸಹ ಕಳೆದಿಲ್ಲ. ಆಗಲೇ ಒಟಿಟಿಗೆ ಏಕೆ ಎಂದು ಒಟಿಟಿ ಸಂಸ್ಥೆ ಪ್ರಶ್ನಿಸಿತು. ಇದಕ್ಕೆ ಸೋಲು ಬಿಟ್ಟರೆ ಬೇರೇನೂ ಇಲ್ಲ ಎಂಬುದು ಸ್ಪಷ್ಟ ಉತ್ತರವಾಗಿತ್ತು.
ಬಿಡುಗಡೆಗೂ ಮುನ್ನ ಚಿತ್ರದ ಮೌಲ್ಯ 130 ಕೋಟಿ ರೂ. ಎಂದು ನಿಗದಿಯಾಗಿತ್ತು. ಆದರೆ, ಕಳಪೆ ಪ್ರದರ್ಶನ, ಅತಿ ಕಡಿಮೆ ರೇಟಿಂಗ್ ಮತ್ತು 8 ವಾರಗಳಿಗೂ ಮೊದಲೇ ರಿಲೀಸ್ಗೆ ಒತ್ತಾಯಿಸಿದ ಹಿನ್ನೆಲೆ ನೆಟ್ಫ್ಲಿಕ್ಸ್ ಥಗ್ ಲೈಫ್ಗೆ 90 ಕೋಟಿ ರೂ. ಕೊಡುವುದಾಗಿ ಮರು ಮಾತುಕತೆಯಲ್ಲಿ ತಿಳಿಸಿತ್ತು. ಆದರೆ, ಅಂತಿಮವಾಗಿ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ 110 ಕೋಟಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸಿನಿ ವರದಿಗಳು ಸ್ಪಷ್ಟಪಡಿಸಿವೆ.
ಮತ್ತೊಂದೆಡೆ ತೆರೆಕಂಡು 8 ವಾರಗಳನ್ನೂ ಪೂರೈಸದ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳು ಛೀಮಾರಿ ಹಾಕಿವೆ. ಈ ನಿಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ರೂಢಿಯಿದೆ. ಥಗ್ ಲೈಫ್ ಸಮಯವು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರಿಂದ, ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಗ್ರೂಪ್ಗಳು ನಿರ್ಮಾಪಕರಿಗೆ 25 ಲಕ್ಷ ರೂ. ದಂಡ ವಿಧಿಸಿವೆ. ಒಪ್ಪಂದ ರದ್ದಾಗಿರುವುದರಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು 25 ಲಕ್ಷ ರೂ. ದಂಡ ವಿಧಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ನಿಟ್ಟಿನಲ್ಲಿ ಚಿತ್ರಕ್ಕೆ ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ಹೊಡೆತಗಳು ಬೀಳುತ್ತಲೇ ಇವೆ. ಈ ವಿಷಯ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).