ರೇಷ್ಮೆನಗರಿಗೂ ವಕ್ಕರಿಸಿದ ಕರೊನಾ... ಮಗು, ಕೆಎಸ್​ಆರ್​ಟಿಸಿ ಬಸ್​ ಚಾಲಕನಿಗೂ ಸೋಂಕು!

corona new
Published on

ರಾಮನಗರ: ಗ್ರೀನ್​ ಝೋನ್​ನಲ್ಲಿದ್ದ ರೇಷ್ಮೆನಗರಿ ರಾಮನಗರಕ್ಕೂ ಮಹಾಮಾರಿ ಕರೊನಾ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಾಗಡಿ ತಾಲೂಕಿನ ಎರಡು ವರ್ಷದ ಮಗುವಿಗೆ ಇಂದು (ಸೋಮವಾರ) ಕೋವಿಡ್​19 ಪಾಸಿಟಿವ್​ ಬಂದಿದೆ. ಅಲ್ಲದೆ ಇಲ್ಲೇ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇವರ ಟ್ರಾವೆಲ್​ ಹಿಸ್ಟರಿ ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ.

ಮಾಗಡಿ ತಾಲೂಕು ಕುದೂರು ಹೋಬಳಿಯ ಮಾರಸಂದ್ರ ಗ್ರಾಮದ 2 ವರ್ಷದ ಗಂಡು ಮಗುವಿಗೆ ಕರೊನಾ ಪಾಸಿಟಿವ್​ ಬಂದಿದೆ. 20 ದಿನಗಳ ಹಿಂದೆ ಪಾಲಕರೊಂದಿಗೆ ಚೆನ್ನೈನ ಟಿ.ನಗರದಿಂದ ಮಾಗಡಿಗೆ ಮಗು ಬಂದಿತ್ತು. ಪಾಲಕರ ವರದಿ ನೆಗೆಟಿವ್​ ಬಂದಿದೆ. ಈ ಮಗುವಿನ ತಾಯಿ 2 ತಿಂಗಳ ಗರ್ಭಿಣಿ.

ಮತ್ತೊಂದು ಪ್ರಕರಣದಲ್ಲಿ ತುಮಕೂರಿನ ಬೆಳ್ಳಾವಿ ಹೋಬಳಿ ಮಾವಿನಕುಂಟೆ ಗ್ರಾಮದ ನಿವಾಸಿ, ಮಾಗಡಿಯ ಕೆಎಸ್ಆರ್​ಟಿಸಿ ಬಸ್ ಚಾಲಕನಿಗೆ ಸೋಂಕು ದೃಢಪಟ್ಟಿದ್ದು, ಡಿಪೋದಲ್ಲಿ ಆತಂಕ ಹೆಚ್ಚಿದೆ. ಈ ಚಾಲಕ ಡಿಪೋ ಸಿಬ್ಬಂದಿ ಜತೆ ಊಟ-ತಿಂಡಿ ಮಾಡಿದ್ದರು ಎನ್ನಲಾಗಿದೆ. ಮಾವಿನಕುಂಟೆ ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.

ಇನ್ನು ರಾಮನಗರದ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿ ಬಂದೋಬಸ್ತ್​ಗೆ ಹಾಸನದಿಂದ ಬಂದಿದ್ದ ಪೊಲೀಸ್ ಪೇದೆಯೊಬ್ಬರಿಗೂ ಕರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದ್ದರಿಂದ ಜಿಲ್ಲೆಯ ಜನರಲ್ಲಿ ಸಹಜವಾಗಿ ಆತಂಕ ಮನೆ ಮಾಡಿತ್ತು. ಈ ಪೇದೆಯು ಇತ್ತೀಚೆಗೆ ಮೃತಪಟ್ಟ ಭೂಗತಲೋಕದ ಮಾಜಿ ಡಾನ್​, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಶವಯಾತ್ರೆ ಮೆರವಣಿಗೆಯ ಬಂದೋಬಸ್ತ್​ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ 3 ದಿನ ವಾಸ್ತವ್ಯ ಹೂಡಿದ್ದರು. ರಾಮನಗರದ ರೇಷ್ಮೆಗೂಡು ಮಾರುಕಟ್ಟೆ ಮತ್ತು ಎಪಿಎಂಸಿ ಮಾರುಕಟ್ಟೆಯ ಬಂದೋಬಸ್ತ್ ಡ್ಯೂಟಿ ಕೂಡ ಮಾಡಿದ್ದರು. ಬಳಿಕ ಇದೇ ತಿಂಗಳ(ಮೇ) 17 ರಂದು ಹಾಸನದ ಕೆಎಸ್​ಆರ್​ಪಿ ಕೇಂದ್ರ ಸ್ಥಾನಕ್ಕೆ ಮರಳಿದ್ದರು. ಸದ್ಯ ಅವರ ವರದಿ ನೆಗೆಟಿವ್​ ಬಂದ ಸುದ್ದಿ ಕೇಳಿ ಜಿಲ್ಲೆಯ ಜನತೆ ತುಸು ನಿರಾಳರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net