More

    ಕಾನೂನು ಸಲಹೆ: ಮಗು ನನ್ನದಲ್ಲ ಎಂದು ಸಾಬೀತಾದರೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಕಾನೂನು ಸಲಹೆ: ಮಗು ನನ್ನದಲ್ಲ ಎಂದು ಸಾಬೀತಾದರೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?
    ಪ್ರಶ್ನೆ: ನನ್ನ ಮದುವೆಯಾಗಿ ಹತ್ತು ವರ್ಷ ಆಗಿದೆ. ನಮಗೆ ಒಂಬತ್ತು ವರ್ಷದ ಮಗ ಇದ್ದಾನೆ. ಕಳೆದ ವರ್ಷ ಮತ್ತೊಂದು ಗಂಡು ಮಗು ಆಯಿತು. ನನಗೂ ನನ್ನ ಹೆಂಡತಿಗೂ ಮಧ್ಯೆ ತುಂಬಾ ಭಿನ್ನಾಭಿಪ್ರಾಯ ಬರುತ್ತಿತ್ತು. ಅವಳು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾಗ ಒಂದು ಸಲ ಜಗಳ ಆಡುವಾಗ ಮಗು ಹುಟ್ಟಿದ ಮೇಲೆ ಅದರ ಮುಖ ನೋಡಿದರೆ ನೀನು ದಿನಾ ಅಳುತ್ತಾ ಸಾಯಬೇಕು ಎಂದಿದ್ದಳು. ನನಗೆ ಅವಳ ಚಾರಿತ್ರ್ಯದ ಬಗ್ಗೆ ಅನುಮಾನವಿದೆ. ಮಗು ಆದ ಮೇಲೆ ಆಸ್ಪತ್ರೆಯಲ್ಲಿ ಮಗುವನ್ನು ನೋಡಿದ್ದು ಅಷ್ಟೆ. ಆಮೇಲೆ ನಾನು ಆ ಕಡೆ ತಲೆ ಹಾಕಿಲ್ಲ. ಈಗ ಡಿ.ಎನ್.ಎ ಪರೀಕ್ಷೆ ಮಾಡಿಸಬೇಕೆಂದಿದ್ದೇನೆ. ಕೋರ್ಟಿನಲ್ಲಿ ಡಿ.ಎನ್.ಎ ಪರೀಕ್ಷೆ ಮಾಡಿಸಿ ಎಂದು ಅರ್ಜಿ ಹಾಕಬೇಕೆಂದಿರುವೆ. ಮಗು ನನ್ನದೇ ಆದರೆ ನಾನು ಸಾಕುತ್ತೇನೆ. ಆ ಮಗು ನನ್ನದಲ್ಲ ಅಂತಾದರೆ ಕೋರ್ಟು ನನಗೆ ವಿಚ್ಛೇದನದ ಆದೇಶ ಕೊಡುತ್ತದಾ? ವಿಚ್ಛೇದನ ಸಿಕ್ಕರೆ ನನ್ನ ಹೆಂಡತಿಗೆ ನನ್ನ ವರಮಾನದಲ್ಲಿ ಎಷ್ಟು ಹಣ ಕೊಡಬೇಕು? ಹಿರಿಯ ಮಗನಿಗೆ ನಾನು ಎಲ್ಲ ಖರ್ಚನ್ನೂ ಮಾಡುತ್ತೇನೆ.

    ಉತ್ತರ: ಡಿ.ಎನ್.ಎ ಪರೀಕ್ಷೆ ಮಾಡಲಿಕ್ಕೆ ಮಾತ್ರ ನೀವು ನ್ಯಾಯಾಲಯಕ್ಕೆ ಹೋಗಲಾಗುವುದಿಲ್ಲ. ಬೇಕಿದ್ದರೆ ನೀವು ನಿಮ್ಮ ಪತ್ನಿ ಕೂತು ಮಾತಾಡಿ ಪರಸ್ಪರ ಒಪ್ಪಿಗೆಯಿಂದ ಡಿ.ಎನ್.ಎ ಪರೀಕ್ಷೆ ಖಾಸಗಿಯಾಗಿ ಮಾಡಿಸಿ ನಿಮ್ಮ ಅನುಮಾನವನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು. ಆದರೆ ನಿಮಗೆ ಕೇವಲ ಅನುಮಾನವಿದ್ದರೆ ಸಂಸಾರದ ಅನ್ಯೋನ್ಯತೆಯನ್ನು ಹಾಳುಮಾಡಿಕೊಳ್ಳಬೇಡಿ.

    ಪತ್ನಿ ಬೇರೆ ವ್ಯಕ್ತಿಯ ಜತೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದೂ ಕ್ರೂರತೆಯೇ ಆಗುತ್ತದೆ. ನಿಮ್ಮ ಪತ್ನಿಯ ವಿರುದ್ಧ ಕ್ರೂರತೆಯ ಆಧಾರದ ಮೇಲೆ ನೀವು ವಿಚ್ಛೇದನಕ್ಕೆ ಪ್ರಕರಣ ಹಾಕಬಹುದು. ಅದನ್ನು ಸಾಬೀತು ಪಡಿಸಲು ಡಿ.ಎನ್.ಎ ಪರೀಕ್ಷೆ ಆಗಬೇಕೆಂದು ಆ ಪ್ರಕರಣದಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಅದನ್ನು ನ್ಯಾಯಾಲಯ ಮನ್ನಣೆ ಮಾಡಿದರೆ ನೀವು ಆಗ ನ್ಯಾಯಾಲಯದ ಮೂಲಕ ಡಿ.ಎನ್.ಎ ಪರೀಕ್ಷೆ ಮಾಡಿಸಬಹುದು.

    ವಿಚ್ಛೇದನ ಆದರೆ ನಿಮ್ಮ ಪತ್ನಿ ಮತ್ತು ಮಕ್ಕಳಿಗೆ ನಿಮ್ಮ ವರಮಾನದ ಐದನೇ ಒಂದು ಭಾಗದಿಂದ ಮೂರನೇ ಒಂದು ಭಾಗವನ್ನು ನ್ಯಾಯಾಲಯ ಸಾಮಾನ್ಯವಾಗಿ ಜೀವನಾಂಶವಾಗಿ ಕೊಡಲು ಆದೇಶ ಮಾಡುತ್ತದೆ. ನಿಮ್ಮದಲ್ಲದ ಮಗುವಿಗೆ ನೀವು ಜೀವನಾಂಶ ಕೊಡಬೇಕಿರುವುದಿಲ್ಲ.
    ನೀವು ಕೋರ್ಟಿಗೆ ಹೋಗುವ ಮೊದಲು ನಿಮ್ಮ ತಾಲೂಕಿನ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರಕ್ಕೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಿ. ಅಲ್ಲಿ ನಿಮ್ಮಿಬ್ಬರನ್ನೂ ಕರೆಯಿಸಿ ಮಾತಾಡಿಸಿ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮಗೆ ನೆಮ್ಮದಿ ಸಿಗಲು ಪ್ರಯತ್ನ ಮಾಡಲಾಗುತ್ತದೆ. ಆ ನಂತರ ಬೇರೆ ದಾರಿಯ ಬಗ್ಗೆ ಯೋಚನೆ ಮಾಡಿ.

    (ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆದಾರರು)

     

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನು ಸಲಹೆ: ವಿಚ್ಛೇದನಕ್ಕೆ ಪರಸ್ಪರ ಒಮ್ಮೆ ಒಪ್ಪಿದರೆ ಸಾಕೆ, ಮತ್ತೆ ನಿರ್ಧಾರ ಬದಲಿಸಿದರೆ ಗತಿ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts