

ಕೋಲಾರ: ಜಿಲ್ಲೆಯ ನರಸಾಪುರ ಬಳಿಯಿರುವ ಐಫೋನ್ ಸಾಧನಗಳನ್ನು ಜೋಡಿಸುವ ವಿಸ್ಟ್ರಾನ್ ಕಾರ್ಖಾನೆಯ ಮೇಲೆ ವೇತನ ವಿಚಾರದಲ್ಲಿ ಕಾರ್ಮಿಕರು ದಾಳಿ ನಡೆಸಿರುವ ವಿಚಾರ ಗೊತ್ತೇ ಇದೆ. ಆದರೆ ಈ ಒಂದೇ ಒಂದು ದಾಳಿಯಿಂದಾಗಿ ಐಫೋನ್ ಸಂಸ್ಥೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.
ದಾಳಿ ನಡೆಸಿದ ನೌಕರರು ಸುಮಾರು 21 ಸಾವಿರ ಐಫೋನ್ಗಳನ್ನು ಧ್ವಂಸ ಮಾಡಿದ್ದಾರೆ. ಜತೆಯಲ್ಲಿ ದುಬಾರಿ ಬೆಲೆಯ ಸಾವಿರಾರು ಐಫೋನ್ಗಳನ್ನು ಕದ್ದಿದ್ದಾರೆ. ಕಚೇರಿಯ ಗಾಜು ಸೇರಿ ಅನೇಕ ವಸ್ತುಗಳನ್ನು ಪುಡಿ ಪುಡಿ ಮಾಡಲಾಗಿದೆ. ದಾಳಿಯಿಂದಾಗಿ ಸುಮಾರು 437 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿಸ್ಟ್ರಾನ್ ಕಂಪನಿ ತಿಳಿಸಿದೆ. ಈ ವಿಚಾರವಾಗಿ ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ.
ಈ ಪ್ರಕರಣದ ಕುತಿತಾಗಿ ಆ್ಯಪಲ್ ಸಂಸ್ಥೆ ವಿಚಾರಣೆ ಆರಂಭಿಸಿದೆ. 'ನಾವು ಆ್ಯಪಲ್ ತಂಡದ ಸದಸ್ಯರು ಮತ್ತು ಲೆಕ್ಕ ಪರಿಶೋಧಕರನ್ನು ಕೋಲಾರಕ್ಕೆ ಕಳುಹಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಮತ್ತು ಪ್ರಕರಣದ ತನಿಖೆಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ' ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)