ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

insta
Published on

ಟೆಹ್ರಾನ್​: ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ಸಾಮಾಜಿಕ ಜಾಲತಾಣಗಳಿಂದಲೇ ಜೀವನ ಹಾಳು ಮಾಡಿಕೊಂಡವರು ಅನೇಕರಿದ್ದಾರೆ. ಇಲ್ಲೊಬ್ಬ ಯುವತಿ ಕೂಡ ಇದೇ ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕುತ್ತಿದ್ದ ಪೋಸ್ಟ್​ಗಳಿಂದಲೇ ಜೈಲು ಸೇರುವಂತಾಗಿದೆ.

ಟೆಹ್ರಾನ್​ ಮೂಲದ ಸಹರ್ ತಬರ್ (ನಿಜವಾದ ಹೆಸರು ಫತಮೆಹ್ ಖಿಶ್ವಾಂಡ್) ಇನ್​ಸ್ಟಾಗ್ರಾಂನಲ್ಲಿ ತುಂಬಾ ಆ್ಯಕ್ಟಿವ್​ ಆಗಿದ್ದರು. ಈಕೆ ನಟಿ ಏಂಜಲೀನಾ ಜೋಲಿಗೆ ಸ್ವಲ್ಪ ಮಟ್ಟಿಗೆ ಹೋಲಿಕೆಯಾಗುತ್ತಾರೆ. ಅದನ್ನೇ ಬಳಸಿಕೊಂಡ ಸಹರ್​​, ಏಂಜಲೀನಾ ಜೋಲಿ ಒಂದು ವೇಳೆ ಜೂಂಬಿಯಾದರೆ ಹೇಗೆ ಕಾಣುತ್ತಾರೆ ಎಂದು ತನ್ನ ಮುಖವನ್ನೇ ಎಡಿಟ್​ ಮಾಡಿ ಫೋಟೋ ಹಾಕುತ್ತಿದ್ದರು. ತನ್ನ ಫೋಟೋಗಳಿಗೆ ವಿಚಿತ್ರ ಎಡಿಟಿಂಗ್​ ಮಾಡಿ ಪೋಸ್ಟ್ ಮಾಡುತ್ತಿದ್ದ ಈಕೆ ಕೆಲವೇ ದಿನಗಳಲ್ಲಿ ಸಕತ್​ ವೈರಲ್​ ಆಗಿದ್ದರು. ಅದನ್ನು ತನ್ನ ಕಲೆಯೆಂದೇ ಭಾವಿಸಿದ್ದರು.

ಆದರೆ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಅಲ್ಲಿನ ಪೊಲೀಸ್​ ಇಲಾಖೆ 2019ರ ಅಕ್ಟೋಬರ್​ 5ರಂದು ಆಕೆಯನ್ನು ಬಂಧಿಸಿತು. ಧರ್ಮನಿಂದನೆ, ಹಿಂಸಾಚಾರವನ್ನು ಪ್ರಚೋದಿಸುವುದು, ಸೂಕ್ತವಲ್ಲದ ವಿಧಾನಗಳ ಮೂಲಕ ಆದಾಯ ಗಳಿಸುವುದು ಮತ್ತು ಯುವಕರನ್ನು ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುವ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಆಕೆ ಜೈಲು ಸೇರಿ ಒಂದು ವರ್ಷವಾದ ನಂತರ ಇದೀನ ಅಲ್ಲಿನ ನ್ಯಾಯಾಲಯ ಪ್ರಕರಣದ ತೀರ್ಪನ್ನು ನೀಡಿದ್ದು, ಸಹರ್​ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಹರ್​ 2029ರವರೆಗೆ ಜೈಲುವಾಸ ಅನುಭವಿಸಬೇಕಿದೆ.

ಸಹರ್​, ಏಂಜಲೀನಾ ರೀತಿ ಕಾಣಲು ಬರೋಬ್ಬರಿ 50 ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ತುಟಿ, ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾಗಿ ಆಕೆ ಒಪ್ಪಿಕೊಂಡಿದ್ದರು. ಆದರೆ ಬಹುತೇಕ ಫೋಟೋಗಳಲ್ಲಿ ಎಡಿಟಿಂಗ್​ ಮೂಲಕವೇ ಆ ರೀತಿ ಕಾಣಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net