

ಬೆಂಗಳೂರು: ಮನೆಗಳವು ಮಾಡುವವರು ಸಾಮಾನ್ಯವಾಗಿ ಬೀಗ-ಬಾಗಿಲು ಮುರಿದು ಒಳ ಪ್ರವೇಶಿಸುತ್ತಾರೆ. ಇಲ್ಲವೇ ಹೆಂಚು-ಕಿತ್ತು ಅಥವಾ ಕನ್ನ ಹಾಕಿ ಒಳನುಗ್ಗುತ್ತಾರೆ. ಆದರೆ ಈ ಕಳ್ಳ ಇವ್ಯಾವುದನ್ನೂ ಮಾಡದೆ ಆರಾಮಾಗಿಯೇ ಕಳವು ಮಾಡುತ್ತಾನೆ. ಹೀಗೆ ಸುಲಭದಲ್ಲಿ ಕಳವು ಮಾಡುತ್ತಿದ್ದ ಈತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಶ್ರೀನಿವಾಸ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ ರೂಪಾಯಿ ಮೌಲ್ಯದ 260 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಅಷ್ಟಕ್ಕೂ ಮನೆಯವರ ಸಣ್ಣದೊಂದು ಎಡವಟ್ಟನ್ನೇ ಈತ ತನ್ನ ಕಳ್ಳತನಕ್ಕೆ ಅನುಕೂಲವಾಗಿಸಿಕೊಳ್ಳುತ್ತಿದ್ದ.
ಕೆಲವು ಮನೆಯವರು ಸಾಮಾನ್ಯವಾಗಿ ಹೊರಗಡೆ ಹೋಗುವಾಗ ಮನೆಗೆ ಬೀಗ ಹಾಕಿ, ಕೀಯನ್ನು ಕಿಟಕಿ ಸಂದಿಯಲ್ಲೋ, ಹೂಕುಂಡದಲ್ಲೋ ಎಲ್ಲೋ ಒಂದು ಕಡೆ ಇಟ್ಟು ಹೋಗುತ್ತಾರೆ. ಇಂಥದ್ದನ್ನು ಅರಿತಿರುವ ಈತ ಅಂಥ ಮನೆಗಳ ಬಳಿ ತೆರಳಿ ಸುಲಭದಲ್ಲಿ ಸಿಗುವ ಕೀ ಬಳಸಿ ಆರಾಮಾಗಿಯೇ ಮನೆಗೆ ಹೊಕ್ಕು ಕಳ್ಳತನ ಮಾಡುತ್ತಿದ್ದ.
ವಿಜಯನಗರದ ಗೃಹಿಣಿಯೊಬ್ಬರು ಸೆ. 30ರಂದು ಯೋಗ ತರಬೇತಿಗೆ ಹೋಗುವಾಗ ಮನೆ ಬಾಗಿಲಿಗೆ ಲಾಕ್ ಮಾಡಿ, ಅದರ ಕೀಯನ್ನು ಹೂವಿನ ಕುಂಡದಲ್ಲಿ ಇಟ್ಟು ತೆರಳಿದ್ದರು. ಆದರೆ ಆಕೆ ಮನೆಗೆ ಮರಳಿದಾಗ ಕಳವು ಆಗಿರುವುದು ಗಮನಕ್ಕೆ ಬಂದಿತ್ತು. ಹೂವಿನ ಕುಂಡದಲ್ಲಿಟ್ಟಿದ್ದ ಬೀಗದ ಕೈ ಬಳಸಿ ಸುಲಭದಲ್ಲಿ ಮನೆಗೆ ಪ್ರವೇಶಿಸಿದ್ದ ಆರೋಪಿ ಶ್ರೀನಿವಾಸ, ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ.
ಈ ಕುರಿತು ಮಹಿಳೆ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಹಿಂದೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಇದೇ ಆರೋಪಿಯ ವಿರುದ್ದ ಕಳ್ಳತನ ಪ್ರಯತ್ನದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯು ಮನೆ ಮಾಲೀಕರಿಗೆ ಸಂಬಂಧಿಕನಾಗಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ಹೇಳಿದ್ದಾರೆ.