ಜಾತಿಗಣತಿ ವರದಿ ಸೋರಿಕೆ ಆಗಿದ್ಯಾ?; 'ಎಲ್ಲಿ ಕೊಡಿ' ಅಂತ ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಹೇಳಿದ್ದೇನು?

Siddaramayya 2
Published on

ಕಲಬುರಗಿ: ರಾಜ್ಯದಲ್ಲಿ ಕೆಲವು ವರ್ಷಗಳಿಂದ ಆಗಾಗ ಮುನ್ನೆಲೆಗೆ ಬರುತ್ತಲೇ ಇರುವ ಜಾತಿಗಣತಿ ವಿಚಾರ ಇಂದು ಮತ್ತೊಮ್ಮೆ ಬಹಿರಂಗವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಜಾತಿಗಣತಿ ವರದಿ ಸೋರಿಕೆ ಆಗಿದೆ ಎಂಬ ಕುರಿತ ಮಾತುಗಳೂ ಕೇಳಿಬಂದವು.

ಕಲಬುರಗಿಯಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಮಾತನಾಡಿದರು. ಅಧಿಕಾರಕ್ಕಾಗಿ ನಾನು ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳಲ್ಲ ಎಂದ ಅವರು ಬಳಿಕ ಜಾತಿಗಣತಿ ವಿಚಾರ ಪ್ರಸ್ತಾಪಿಸಿದರು.

55 ಮಾನದಂಡಗಳನ್ನು ಇಟ್ಟುಕೊಂಡು ಈ ಜಾತಿಗಣತಿ ಸಮೀಕ್ಷೆ ಮಾಡಲಾಗಿದೆ. ಇಂಥ ಒಂದು ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆ ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಮೊದಲು ಆಗಿರುವುದು. ಸ್ವಾತಂತ್ರ್ಯ ಬಂದ ಮೇಲೆ ಜಾತಿವಾರು ಸಮೀಕ್ಷೆ ನಡೆದೇ ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಬಿಟ್ಟರೆ ಬೇರೆ ಯಾವ ವರ್ಗದ್ದೂ ಸಮೀಕ್ಷೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಮೀಕ್ಷೆ ಯಾವ ಜಾತಿಯ ವಿರುದ್ಧವೂ ಅಲ್ಲ ಎಂದ ಸಿದ್ದರಾಮಯ್ಯ, ಜಾತಿ ಸಮೀಕ್ಷೆ ವರದಿ ಲೀಕ್​ ಆಗಿದೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬದನ್ನು ಹೇಳಿದರು. ಆದರೆ ಎಲ್ಲಿ ಲೀಕ್ ಆಗಿದೆ, ಕೊಡಿ ಎಂದರೆ ಯಾರೂ ಕೊಡುತ್ತಿಲ್ಲ ಎನ್ನುವ ಮೂಲಕ ವರದಿ ಲೀಕ್​ ಆಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net