ಇದು ವಿಶ್ವದ ಏಕೈಕ ಸಸ್ಯಾಹಾರಿ ನಗರ! ಇಲ್ಲಿ ಮಾಂಸದೂಟಕ್ಕೆ ಜಾಗವೇ ಇಲ್ಲ, ನಿಷೇಧಕ್ಕೆ ಹೀಗಿದೆ ಕಾರಣ | Vegetarians

Vegetarians
Published on

Vegetarians: ಆಹಾರ ಪ್ರಿಯರು ಹೆಚ್ಚಾಗಿ ಸಸ್ಯಹಾರ ಮತ್ತು ಮಾಂಸಹಾರ ಆಹಾರವನ್ನು ಸೇವಿಸಿ ಆರೋಗ್ಯಕರವಾದ ಅನುಭವ ಪಡೆಯಲು ಬಯಸುತ್ತಾರೆ. ಯಾವುದೇ ಹೊಸ ಜಾಗಕ್ಕೆ ಪ್ರಯಾಣಿಸುವಾಗ ಅಲ್ಲಿನ ರುಚಿಯನ್ನು ಸವಿಯಲು ಹಾತೊರೆಯುತ್ತಾರೆ. ಕೆಲವರು ಸಸ್ಯಹಾರದತ್ತ ಹೆಚ್ಚಿನ ಗಮನ ಹರಿಸಿದರೆ, ಇನ್ನೂ ಕೆಲವರು ಮಾಂಸಹಾರವನ್ನು ಇಷ್ಟಪಡುತ್ತಾರೆ. ಆದರೆ, ಇಲ್ಲೊಂದು ನಗರದಲ್ಲಿ ಕೇವಲ ಸಸ್ಯಹಾರದ ಆಹಾರ ಮಾತ್ರ ದೊರೆಯುತ್ತದೆ. ಮಾಂಸಹಾರ ಆಹಾರದ ಮಾರಾಟ, ಖರೀದಿ ಮತ್ತು ಸೇವನೆಯನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಪಾಲಿಟಾನಾ ನಗರದಲ್ಲಿ ಮಾಂಸ ಮಾರಾಟ ಮತ್ತು ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶ್ವದ ಏಕೈಕ ಶುದ್ಧ ಸಸ್ಯಾಹಾರಿ ನಗರ ಎಂಬ ಖ್ಯಾತಿಯನ್ನು ಪಡೆದಿರುವ ಇಲ್ಲಿ ಮಾಂಸಾಹಾರ ನಿಷೇಧಿಸಲು ಕಾರಣ ಹೀಗಿದೆ. ಜೈನ ಧರ್ಮದ ಪ್ರಾಬಲ್ಯವಿರುವ ಪಾಲಿಟಾನಾದಲ್ಲಿ 2014ರಲ್ಲಿ 200ಕ್ಕೂ ಅಧಿಕ ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿ, ನಗರದಲ್ಲಿದ್ದ 250ಕ್ಕೂ ಹೆಚ್ಚು ಮಾಂಸದಂಗಡಿಗಳನ್ನು ಮುಚ್ಚಿಸಿದರು. ಜತೆಗೆ ಮಾಂಸಾಹಾರ ನಿಷೇಧಿಸಬೇಕೆಂದು ಪ್ರತಿಭಟನೆ, ಉಪವಾಸ ಸತ್ಯಾಗ್ರಹವನ್ನು ಕೂಡ ನಡೆಸಿದರು.

ಇದರ ಪರಿಣಾಮವಾಗಿ ಜೈನ ಸಮುದಾಯದ ಭಾವನೆಗಳನ್ನು, ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ, ಅಲ್ಲಿನ ಸರ್ಕಾರವು ಪಾಲಿಟಾನಾ ನಗರದಲ್ಲಿ ಪ್ರಾಣಿ ವಧೆ, ಮೀನು, ಮಾಂಸ, ಮೊಟ್ಟೆ ಮಾರಾಟದ ನಿಷೇಧವನ್ನು ಹೇರಿತು. ಹಾಗೂ ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡವನ್ನು ಸಹ ವಿಧಿಸಿತು. ದೇವಾಲಯಗಳ ನಗರ ಎಂದೂ ಕರೆಯಲ್ಪಡುವ ಈ ನಗರದಲ್ಲಿ 800ಕ್ಕೂ ಹೆಚ್ಚು ಜೈನ ದೇವಾಲಯಗಳಿವೆ. ಇದು ಜೈನ ಧರ್ಮದ ಯಾತ್ರಾ ಸ್ಥಳವೂ ಹೌದು. ಜೈನ ಸನ್ಯಾಸಿಗಳ ಪ್ರತಿಭಟನೆಯ ಫಲವಾಗಿ ಇಲ್ಲಿ ಸಂಪೂರ್ಣವಾಗಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ.

ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿಟಾನಾ ನಗರವು ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮತ್ತು ಸೇವನೆ ಸೇರಿದಂತೆ ನಾನ್‌ವೆಜ್‌ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ನಗರ ಎಂಬ ಪಟ್ಟಿಗೆ ಸೇರಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net