

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಂರ ತಂದೆ ಅಜಂ ಸಿದ್ದಿಖಿ ಅವರು, ತಮ್ಮ ಮಗನಿಗೆ ಭಾರತದ ವಿರುದ್ಧ ಗೆದ್ದ ಟಿ20 ವರ್ಲ್ಡ್ ಕಪ್ ಪಂದ್ಯಕ್ಕೆ ನೀಡುವ ಮ್ಯಾಚ್ ಫೀಸನ್ನು ಮಹಿಳಾ ಕ್ರಿಕೆಟರ್ ಬಿಸ್ಮಾ ಅಮ್ಜದ್ರ ಚಿಕಿತ್ಸೆಗಾಗಿ ಬಳಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಮನವಿ ಮಾಡಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾದ ಬಿಸ್ಮಾಗೆ ಕರಾಚಿಯಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರದ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು, ಕನ್ಕಶನ್ ಅನುಭವಿಸಿದ್ದರು. ಆರಂಭಿಕವಾಗಿ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ನಿರಾಕರಿಸಿದ್ದ ಪಿಸಿಬಿ, ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲ್ಪಟ್ಟ ನಂತರ ಅವರ ಆರೋಗ್ಯದ ಜವಾಬ್ದಾರಿ ವಹಿಸುವುದಾಗಿ ಹೇಳಿಕೆ ನೀಡಿತ್ತು.
ಇದೀಗ ಬಾಬರ್ ಅಜಂರಿಗೆ ಭಾರತ ವಿರುದ್ಧದ ಪಂದ್ಯಕ್ಕೆ ಸಿಗುವ ಭಾರೀ ಮೊತ್ತವನ್ನು ಬಿಸ್ಮಾರ ಚಿಕಿತ್ಸೆಗಾಗಿ ವಿನಿಯೋಗಿಸಬೇಕೆಂದು ಅಜಂ ಸಿದ್ದಿಖಿ ಹೇಳಿದ್ದಾರೆ. "ತಮ್ಮ ಯೂನಿಫಾರಂ ಮೇಲೆ ಪಾಕಿಸ್ತಾನದ ಸ್ಟಾರ್ ಹಾಕಿಕೊಂಡಿರುವ ಯಾರೊಬ್ಬರು ಅಸಹಾಯಕರಾದರೂ, ದೇಶವೇ ಅಸಹಾಯಕವಾದಂತೆ" ಎಂದಿದ್ದಾರೆ. (ಏಜೆನ್ಸೀಸ್)