

ಚಂಡೀಗಡ: ಪಂಜಾಬ್ ಕಾಂಗ್ರೆಸ್ನಲ್ಲಿ ತಳಮಳ ಮೂಡಿಸಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ರಾಜೀನಾಮೆ ಪ್ರಸಂಗಕ್ಕೆ ಅಂತೂ ತೆರೆಬಿದ್ದಿದೆ. ತಾವು ಪಂಜಾಬ್ ಪ್ರದೇಶ್ ಕಾಂಗ್ರೆಸ್ ಕಮಿಟಿ(ಪಿಪಿಸಿಸಿ) ಅಧ್ಯಕ್ಷಗಿರಿಗೆ ಸೆಪ್ಟೆಂಬರ್ ಅಂತ್ಯದಲ್ಲಿ ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿರುವುದಾಗಿ ಅವರು ಘೋಷಿಸಿದ್ದಾರೆ.
ಇಂದು(ನ.5) ಚಂಡೀಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಸಂಗತಿ ತಿಳಿಸಿದ ಸಿಧು, ರಾಜ್ಯಕ್ಕೆ ಹೊಸ ಅಟೋರ್ನಿ ಜನರಲ್ರ ನೇಮಕವಾದ ನಂತರ ತಾವು ಮತ್ತೆ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. "ಇದು ವೈಯಕ್ತಿಕ ಅಹಂಕಾರದ ವಿಷಯವಾಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಪಂಜಾಬಿಯ ಹಿತಾಸಕ್ತಿಯಾಗಿತ್ತು" ಎಂದವರು ಹೇಳಿದ್ದಾರೆ.
ಪಂಜಾಬ್ ಅಡ್ವೊಕೇಟ್ ಜನರಲ್ ಆಗಿ ಅಮರ್ ಪ್ರೀತ್ ಸಿಂಗ್ ಡಿಯೋಲ್ ಅವರನ್ನು ನೇಮಕ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು, ಕೆಲವು ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಬಂದಿರುವವರಿಗೆ ರಾಜ್ಯವನ್ನು ರಕ್ಷಿಸುವ ಸ್ಥಾನ ನೀಡಲಾಗುತ್ತಿದೆ ಎಂದು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)