

ವಾಷಿಂಗ್ಟನ್: ದೀಪಾವಳಿಯ ಹಬ್ಬಕ್ಕೆ ಭಾರತದಾದ್ಯಂತ ಮತ್ತು ಭಾರತೀಯರಿರುವೆಡೆಯೆಲ್ಲಾ ದೀಪ ಬೆಳಗಿಸುವ ಸಂಪ್ರದಾಯ ಹರಡಿದೆ. ಈ ಬಾರಿಯ ವಿಶೇಷವೆಂದರೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಕೂಡ ತಮ್ಮ ಭವ್ಯ ನಿವಾಸದಲ್ಲಿ ಜ್ಯೋತಿ ಬೆಳಗಿ ದೀಪಾವಳಿಯ ಶುಭಾಶಯ ಕೋರಿದ್ದಾರೆ.
"ದೀವಾಲಿಯ ಬೆಳಕು ನಮಗೆ ಕತ್ತಲಿನಿಂದ ಜ್ಞಾನ, ಬುದ್ಧಿ ಮತ್ತು ಸತ್ಯಗಳಿವೆ, ವಿಭಜನೆಯ ಜೊತೆಗೆ ಏಕತೆ ಇದೆ, ಹತಾಶೆಯ ನಡುವೆ ಆಶಾಭಾವವಿದೆ ಎಂದು ನೆನಪಿಸಲಿ" ಎಂದು ಬಿಡೆನ್ ಗುರುವಾರದಂದು ಟ್ವೀಟ್ ಮಾಡಿ ಹಾರೈಸಿದ್ದಾರೆ. "ಅಮೆರಿಕ ಮತ್ತು ಜಗತ್ತಿನೆಲ್ಲೆಡೆ ಹಬ್ಬ ಆಚರಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧಧರ್ಮೀಯರಿಗೆ - ಪೀಪಲ್ಸ್ ಹೌಸ್ನಿಂದ ನಿಮ್ಮ ಮನೆಗೆ - ದೀಪಾವಳಿ ಶುಭಾಶಯಗಳು" ಎಂದು ಶುಭ ಕೋರಿದ್ದಾರೆ.
ಈ ಟ್ವಿಟರ್ ಸಂದೇಶದೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾದ ಬಿಡೆನ್, ತಾವು ಮತ್ತು ಪತ್ನಿ ಜಿಲ್ ಬಿಡೆನ್ ತಮ್ಮ ಅಧಿಕೃತ ನಿವಾಸ ವೈಟ್ ಹೌಸಿನಲ್ಲಿ ಹೂವಿನ ರಂಗೋಲಿಯ ಮಧ್ಯದಲ್ಲಿರಿಸಿದ ದೀಪಗಳನ್ನು ಬೆಳಗಿಸುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬಿಡೆನ್ರ ಈ ಪೋಸ್ಟ್ಗೆ ಅದಾಗಲೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಲೈಕುಗಳು ಲಭಿಸಿವೆ. (ಏಜೆನ್ಸೀಸ್)