ಮುಂದೆ ಇವರು ಗಾಳಿಗೂ ಟ್ಯಾಕ್ಸ್ ಹಾಕೋ ಕಾಲ ದೂರವಿಲ್ಲ: ಬಸವರಾಜ ಬೊಮ್ಮಾಯಿ | Tax

ವಿಜಯವಾಣಿ - 2024-12-26T140206.524
Published on

ಹಾವೇರಿ: ಮುನಿರತ್ನ ನಾಟಕ‌ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಯಾರಾದರೂ ಉಂಟಾ? ನಮ್ಮ ಮೇಲೆ ನಾವೇ ಮೊಟ್ಟೆ ಹಾಕಿಸಿಕೊಂಡು ಅವಮಾನ ಮಾಡಿಸಿಕೊಳ್ಳೋಕೆ ಆಗುತ್ತಾ? ಎಂದು ಹೇಳಿದರು.

ಹೈಕೋರ್ಟ್ ಮದ್ಯಪ್ರವೇಶಿಸದೆ ಇದ್ದಿದ್ರೆ..

ಸಿ.ಟಿ. ರವಿಗೆ ಧರ್ಮಸ್ಥಳಕ್ಕೆ ಬರಲಿ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ವಿಚಾರದ ಬಗ್ಗೆ ಮಾತನಾಡಿದ ಅವರು, "ಅದು ಅವರವರಿಗೆ ಬಿಟ್ಟಿದ್ದು. ದೇವರ ನಂಬಿಕೆ ಅವರವರ ವೈಯಕ್ತಿಕ ವಿಚಾರ. ಸಿ.ಟಿ. ರವಿ ಹಾಗೂ ಹೆಬ್ಬಾಳ್ಕರ್ ಇಬ್ಬರೂ ಸಹ ದೂರನ್ನು ದಾಖಲಿಸಿದ್ದಾರೆ. ಒಂದು ಕಡೆ ಕಂಪ್ಲೇಂಟ್​ಗೆ ಕೂಡಲೇ ರಿಯಾಕ್ಟ್ ಮಾಡ್ತೀರಿ. ಆದರೆ ರವಿ ನೀಡಿರುವ ದೂರಿನ ಬಗ್ಗೆ ಎಫ್​ಐಆರ್ ಮಾಡಿಯೇ ಇಲ್ಲ. ಹೈಕೋರ್ಟ್ ಮದ್ಯಪ್ರವೇಶ ಮಾಡದೆ ಹೋಗಿದ್ರೆ ಸಿ.ಟಿ ರವಿ ಅವರ ಪರಿಸ್ಥಿತಿ ಏನು ಆಗ್ತಿತ್ತೋ ಗೊತ್ತಿಲ್ಲ?" ಎಂದರು.

ಬೆಲೆ ಏರಿಕೆ ಪರ್ವ

ಇನ್ನು ರಾಜ್ಯ ಸರ್ಕಾರದಿಂದ ಹಾಲಿನ ದರ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, "ರಾಜ್ಯ ಸರ್ಕಾರದಿಂದ ಬೆಲೆ ಏರಿಕೆ ಪರ್ವ ನಡೆದಿದೆ. ಸ್ಟಾಂಪ್ ಡ್ಯೂಟಿ, ಎಕ್ಸೈಜ್ ಡ್ಯೂಟಿ ಎಲ್ಲದರ ತೆರಿಗೆ ಹೆಚ್ಚಿಸಿದ್ದಾರೆ. 15,000 ಕೋಟಿ ರೂ. ಹೊಸ ತೆರಿಗೆ ಹಾಕಿದ್ದಾರೆ. ಹಾಲಿನ ದರ, ನೀರಿನ ದರ ಎಲ್ಲದರಲ್ಲೂ ತೆರಿಗೆ ಹೆಚ್ಚಿಗೆ ಮಾಡ್ತಿದ್ದಾರೆ. ಜನ ಸಾಮಾನ್ಯರು ಬಳಕೆ‌ ಮಾಡುವಂತ ಎಲ್ಲಾ ವಸ್ತುಗಳ ದರವನ್ನು ಹೆಚ್ಚಿಸಲಾಗಿದೆ" ಎಂದರು.

"ಮುಂಬರುವ ದಿನಗಳಲ್ಲಿ ಮರಳು ಸೇರಿದಂತೆ ಇನ್ನಷ್ಟು ವಸ್ತುಗಳ ಮೇಲೆ ತೆರಿಗೆ ವಿಧಿಸಲಿದ್ದಾರೆ. ಪ್ರತಿ ಆರ್ಥಿಕ ಚಟುವಟಿಕೆ ಮೇಲೆ ಟ್ಯಾಕ್ಸ್ ಹಾಕುತ್ತಲೇ ಇದ್ದಾರೆ. ಮುಂದೆ ಇವರು ಗಾಳಿಗೂ ಟ್ಯಾಕ್ಸ್ ಹಾಕೋ ಕಾಲ ದೂರವಿಲ್ಲ" ಎಂದು ಟೀಕಿಸಿ ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net