

IPL 2025: ಐಪಿಎಲ್ 18ನೇ ಆವೃತ್ತಿಯ ಪ್ರತಿ ಪಂದ್ಯವು ಕುತೂಹಲ, ರೋಚಕತೆಗೆ ಸಾಕ್ಷಿಯಾಗುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಬಲಿಷ್ಠ ತಂಡಗಳು ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್ ರೈಡರ್ಸ್ ತಂಡಗಳು ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕಿಂತ ಕಳೆಗಿವೆ. ಇದು ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಹಿರಿಯ ಕ್ರಿಕೆಟಿಗರ ಅಚ್ಚರಿಗೂ ಕಾರಣವಾಗಿದೆ.
ಐಪಿಎಲ್ 2025ರ ಸೀಸನ್ನಲ್ಲಿ 10 ತಂಡಗಳ ಬ್ಯಾಟರ್ಗಳು ಕೂಡ ಅದ್ಭುತ ಪ್ರದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್, ಶ್ರೇಯಸ್ ಅಯ್ಯರ್, ಮಹೇಂದ್ರ ಸಿಂಗ್ ಧೋನಿ, ನಿಕೋಲಸ್ ಪೂರನ್ ಸೇರಿದಂತೆ ಮುಂತಾದವರು ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇವರೆಲ್ಲರ ಪ್ರದರ್ಶನವನ್ನು ನೋಡುತ್ತಿರುವ ಆಸ್ಟ್ರೇಲಿಯಾ ದಿಗ್ಗಜ, ಮಾಜಿ ಸಿಎಸ್ಕೆ ಬ್ಯಾಟರ್ ಮ್ಯಾಥ್ಯೂವ್ ಹೆಡನ್, ಈ ಬಾರಿಯ ಐಪಿಎಲ್ನಲ್ಲಿ ಇಬ್ಬರು ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಹೆಸರಿಸಿದ್ದಾರೆ.
"ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಸನ್ರೈಸರ್ಸ್ ಹೈದರಾಬಾದ್ ಓಪನಿಂಗ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್ ಹೆಡ್ ಬಹಳ ಡೇಂಜರಸ್ ಬ್ಯಾಟರ್ಗಳು. ಟ್ರಾವಿಸ್ ಹೆಡ್ ವೇಗಿಗಳಿಗೆ ಬೆವರಿಳಿಸಿದರೆ, ಅಭಿಷೇಕ್ ಸ್ಪಿನ್ನರ್ಗಳಿಗೆ ದುಃಸ್ವಪ್ನವಾಗಿ ಕಾಡಿದರು. ಟ್ರಾವಿಸ್ ಕ್ರೀಸ್ಗೆ ಅಂಟಿ ನಿಲ್ಲಲು ಒಂದಷ್ಟು ಸಮಯ ತೆಗೆದುಕೊಂಡರು. ಇವರಿಬ್ಬರು ಆಡಿದ ರೀತಿ ಬಹಳ ಚೆನ್ನಾಗಿತ್ತು. ಆ ರೀತಿಯ ಸ್ಪಷ್ಟತೆ ಟಿ20 ಕ್ರಿಕೆಟ್ನಲ್ಲಿ ಅಪರೂಪ" ಎಂದರು.
"ವಿಶೇಷವಾಗಿ ಬೃಹತ್ ರನ್ ಗುರಿಯನ್ನು ಬೆನ್ನತ್ತಿದಾಗ ಪ್ರತಿ ಬಾಲ್ ಕೂಡ ಕೌಂಟ್ ಆಗುತ್ತದೆ. ಮತ್ತು ಒಂದೊಂದು ಓವರ್ ಮುಗಿಯುತ್ತಿದ್ದಂತೆ ಒತ್ತಡ ಕೂಡ ಹೆಚ್ಚಾಗುತ್ತಲೇ ಇರುತ್ತದೆ. ಆದರೆ, ಇವರಿಬ್ಬರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ನಿಜವಾಗಿಯೂ ಗಮನಾರ್ಹ" ಎಂದು ಹೊಗಳಿದ್ದಾರೆ,(ಏಜೆನ್ಸೀಸ್).