

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಈಗ ಮೊದಲಿನಂತಾಗಿದ್ದೇನೆ. ನಿಧಾನವಾಗಿ ವಾಕ್ ಮಾಡಲು ಶುರು ಮಾಡಿ, ಈಗ ಹಿಂದಿನ ವೇಗದಲ್ಲೇ ನಡೆಯುತ್ತೇನೆ. ಮೊದಲು ಊಟ ಸೇರುತ್ತಿರಲಿಲ್ಲ. ಈಗೀಗ ಸ್ವಲ್ಪ ತಿನ್ನುತ್ತಿದ್ದು, ಇಂಪ್ರೂವ್ ಆಗುತ್ತಿದೆ. ಜೀವನದ ಈ ಏರಿಳಿತದಿಂದ ಪಾಠ ಕಲಿತಿದ್ದೇನೆ' ಎಂದು ನಗುತ್ತಲೇ ಮಾತಿಗಿಳಿದರು ನಟ ಶಿವರಾಜಕುಮಾರ್. ಕಳೆದ ಜನವರಿಯಲ್ಲಿ ಅಮೆರಿಕದಿಂದ ಚಿಕಿತ್ಸೆ ಪಡೆದು ವಾಪಸ್ಸಾದ ಅವರು, ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಸಿನಿಮಾಗಳತ್ತ ಗಮನ ಹರಿಸಿರುವ ಶಿವಣ್ಣ, ಮಗಳು ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ ಫೈರ್ಫ್ಲೈ ಟ್ರೇಲರ್ ಬಿಡುಗಡೆ ಮಾಡಿದ ಬಳಿಕ ಮಾತಿಗೆ ಸಿಕ್ಕಿದ್ದರು.
"ಚಿಕಿತ್ಸೆಗೆ ತೆರಳುವ ಮುನ್ನವೇ ಫೈರ್ಫ್ಲೈ "ವೀರಚಂದ್ರಹಾಸ', "45' ಚಿತ್ರಗಳ ಶೂಟಿಂಗ್ ಪೂರ್ಣಗೊಳಿಸಿದ್ದೆ. ನಿವೇದಿತಾ ಫೈರ್ಫ್ಲೈ ಕಥೆ ಕೇಳಿದಾಗ ವಿಭಿನ್ನವಾಗಿದೆ ಅಂತನ್ನಿಸಿತು. ಬಳಿಕ ವಂಶಿ ನರೇಟ್ ಮಾಡಿದರು. ಕಮರ್ಷಿಯಲ್ ಅಂಶಗಳ ಜತೆಗೆ ಎಮೋಷನ್ಸ್ ಮಿಶ್ರಣವಿರುವ ಚಿತ್ರವಿದು. ಪ್ರತಿಯೊಬ್ಬರೂ ರಿಲೇಟ್ ಆಗಬಹುದು. ಪ್ರಯೋಗ ಕೂಡ ಹೌದು. ಸಿನಿಮಾ ನೋಡಿ ನನಗೂ ಖುಷಿಯಾಯಿತು. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣರಾಜ್ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ನೋಡಿದವರಿಗೆ ಸರ್ಪೆಸ್ ಆಗಲಿದೆ' ಎಂದು ಹೇಳಿಕೊಳ್ಳುತ್ತಾರೆ.
ಸಿನಿಮಾ ನಿರ್ಮಾಣದ ಬಗ್ಗೆ ಶಿವಣ್ಣ, "ಯಾವುದೇ ಉದ್ಯಮದಲ್ಲೂ ರಿಸ್ಕ್ ಇರುತ್ತದೆ. ಅದೇ ರೀತಿಯ ರಿಸ್ಕ್ ಚಿತ್ರ ನಿರ್ಮಾಣದಲ್ಲೂ ಇದೆ. ಹಾಗಂತ ಹಿಂಜರಿಯದೇ ಸಿನಿಮಾಗೆ ಏನು ಬೇಕೋ ಅದನ್ನು ಕೊಡಬೇಕು. ಇದು ರಿಯಾಲಿಟಿಗೆ ಹತ್ತಿರವಾದ ್ಯಾಮಿಲಿ ಎಂಟರ್ಟೇನರ್ ಸಿನಿಮಾ. ಎಲ್ಲ ಭಾಷೆಗಳಲ್ಲೂ ಡಬ್ ಮಾಡಲಿದ್ದೇವೆ. ಈಗಾಗಲೇ ಪರಭಾಷೆಗಳಿಂದ ಆರ್ ಕೂಡ ಬಂದಿದೆ. ಒಟಿಟಿ, ಟಿವಿಯವರು ಸಿನಿಮಾ ಖರೀದಿಸುತ್ತಿಲ್ಲ ಅಂತ ಭಯಪಡದೇ ಜನರಿಗಾಗಿ ಸಿನಿಮಾ ಮಾಡಲು ಪ್ರಾರಂಭಿಸಿದರೆ ಚಿತ್ರಗಳ ಗುಣಮಟ್ಟ ಹೆಚ್ಚಾಗುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವಿಭಿನ್ನ ರೀತಿಯ ಪಾತ್ರ, ಸಿನಿಮಾಗಳನ್ನು ಮಾಡಲು ನಿರ್ಧರಿಸಿರುವ ಶಿವಣ್ಣಗೆ ಈಗಲೂ ಆ್ಯಕ್ಷನ್ ಸಿನಿಮಾಗಳೇ ಹೆಚ್ಚಾಗಿ ಬರುತ್ತಿವೆಯಂತೆ. "ಯುವಪ್ರತಿಭೆಗಳು ನನ್ನ ಜತೆ ಸಿನಿಮಾ ಮಾಡಲು ಈಗಲೂ ಬರುತ್ತಾರಲ್ಲಾ ಅದೇ ಖುಷಿಯ ವಿಷಯ. ಯಾರು ಬಂದು ಹೇಳಿದರೂ ಕಥೆ ಕೇಳುತ್ತೇನೆ' ಎನ್ನುತ್ತಾರೆ.
ಕೆಲ ದಿನಗಳ ಹಿಂದಷ್ಟೇ ಶಿವಣ್ಣ ರಾಮಚರಣ್ ತೇಜಾ ನಟಿಸುತ್ತಿರುವ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿರುವ "ಪೆದ್ದಿ' ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. "ಎರಡು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇದರಲ್ಲಿ ಆ್ಯಕ್ಷನ್ ಸನ್ನಿವೇಶಗಳೂ ಹೆಚ್ಚಿರುವ ಕಾರಣ, ನಾನೂ ದೈಹಿಕವಾಗಿ ಮತ್ತಷ್ಟು ರೆಡಿಯಾಗಬೇಕಿದೆ. ನನಗೆ ತಂತ್ರಜ್ಞಾನ ಬಳಸಿ ಚೀಟ್ ಮಾಡಲು ಇಷ್ಟವಿಲ್ಲ. ಹೀಗಾಗಿ ಜುಲೈನಿಂದ ನನ್ನ ಭಾಗದ ಚಿತ್ರೀಕರಣ ಮುಂದುವರಿಯಲಿದೆ. ಈ ರೀತಿ ಪಾತ್ರ ಮಾಡಿದರೆ ಚಂದ ಅಂತ ನಾನು ಅಂದುಕೊಳ್ಳುತ್ತಿದ್ದ ಪಾತ್ರವೇ ಸಿಕ್ಕಿದೆ' ಎಂದು ಮಾಹಿತಿ ನೀಡುತ್ತಾರೆ.
ಜತೆಗೆ ಈ ಶುಕ್ರವಾರ ಅವರು ವಿಶೇಷ ಪಾತ್ರದಲ್ಲಿ ನಟಿಸಿರುವ "ವೀರಚಂದ್ರಹಾಸ', ಮುಂದಿನ ಶುಕ್ರವಾರ ಫೈರ್ಫ್ಲೈ ಚಿತ್ರಗಳು ರಿಲೀಸ್ ಆಗಲಿದ್ದು, ಆ. 15ಕ್ಕೆ ಪ್ಯಾನ್ ಇಂಡಿಯಾ "45' ತೆರೆಗೆ ಬರಲಿದೆ. ಹಾಗೇ "ಕ್ಯಾಪ್ಟನ್ ಮಿಲ್ಲರ್' ಖ್ಯಾತಿಯ ತಮಿಳು ನಿರ್ದೇಶಕ ಅರುಣ್ ಹೊಸ ಸಿನಿಮಾ, ರಜಿನಿಕಾಂತ್ ಜತೆ "ಜೈಲರ್ 2', ಶ್ರೀನಿ ನಿರ್ದೇಶಿಸಲಿರುವ "ಎ ಫಾರ್ ಆನಂದ್', ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜತೆ ಒಂದು ಸಿನಿಮಾ ಲೈನಪ್ನಲ್ಲಿವೆ. ಸದ್ಯಕ್ಕೆ ಹೇಮಂತ್ ರಾವ್ ನಿರ್ದೇಶಿಸಲಿರುವ "ಭೈರವನ ಕೊನೆ ಪಾಠ' ಮುಂದಿನ ವರ್ಷಕ್ಕೆ ಹೋಗಿದ್ದು, ಈ ವರ್ಷ ಹೇಮಂತ್ ಮತ್ತು ಡಾಲಿ ಧನಂಜಯ ಕಾಂಬಿನೇಷನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.