ಮಗನ ಕಾಮದಾಟಕ್ಕೆ ತಂದೆ ಬಲಿ! ಕಡೆಗೂ ಸೇಡು ತೀರಿಸಿಕೊಂಡ ದುಷ್ಕರ್ಮಿಗಳು, ಕುಟುಂಬಸ್ಥರು ಕಣ್ಣೀರು | Murder Case

ವಿಜಯವಾಣಿ (22)
Published on

Murder Case: ಪುತ್ರನ ವಿವಾಹೇತರ ಸಂಬಂಧಕ್ಕೆ ತಂದೆ ಬರ್ಬರವಾಗಿ ಹತ್ಯೆಯಾದ ದುರ್ಘಟನೆ ಆಂಧ್ರಪ್ರದೇಶದ ನದಿಂಪಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಇಬ್ಬರು ಮಕ್ಕಳ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕ, ಆಕೆ ಉಳಿದಿದ್ದ ಗ್ರಾಮದಲ್ಲೇ ಉಳಿದುಕೊಂಡಿದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.

ಮಗನ ಕಾಮದಾಟಕ್ಕೆ ತಂದೆ ಬಲಿಯಾದ ಘಟನೆ ಸದ್ಯ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಗ್ರಾಮಸ್ಥರ ಪ್ರಕಾರ, ಅಚಂಪೇಟ ಮಂಡಲದ ನದಿಂಪಳ್ಳಿ ಗ್ರಾಮದ ಮೃತ ಬೂರಂ ವೀರಯ್ಯ (54) ಅವರ ಕಿರಿಯ ಮಗ ಪರಮೇಶ್, ಅದೇ ಗ್ರಾಮದ ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದು ಮಹಿಳೆಯ ಕುಟುಂಬಸ್ಥರಿಗೆ ತಿಳಿಯಿತು. ಒಂದು ತಿಂಗಳ ಹಿಂದೆ ಈ ವಿಚಾರಕ್ಕೆ ಆಕೆಯ ಮನೆಯವರು ವೀರಯ್ಯ ಅವರ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿ, ಎಚ್ಚರಿಕೆ ಕೊಟ್ಟು ಕಳಿಸಿದ್ದರು. ಆದ್ರೆ, ದ್ವೇಷದ ಜ್ವಾಲೆ ಅವರಲ್ಲಿ ಆರಿರಲಿಲ್ಲ ಎಂದಿದ್ದಾರೆ.

ತಮ್ಮ ಮನೆಯ ಹೆಣ್ಣುಮಗಳ ಮೇಲೆ ಕಣ್ಣಾಕಿದ್ದ ಪರಮೇಶ್​ ಮೇಲಿನ ದ್ವೇಷ ಅವರಲ್ಲಿ ಕಾಡುತ್ತಿತ್ತು. ಸಮಯಕ್ಕೆ ಕಾದು ಕುಳಿತಿದ್ದ ಮಹಿಳೆಯ ಕುಟುಂಬಸ್ಥರಿಗೆ ಪರಮೇಶ್​ ತಂದೆ ವೀರಯ್ಯ ಮತ್ತು ಅವರ ಹಿರಿಯ ಮಗ ವೆಂಕಟೇಶ್ ದಾರಿ ಮಧ್ಯೆ ಕಂಡಿದ್ದಾರೆ. ಅಚಂಪೇಟದಿಂದ ನದಿಂಪಳ್ಳಿಗೆ ಬೈಕ್‌ನಲ್ಲಿ ವೀರಯ್ಯ ಬರುತ್ತಿರುವುದು ನೋಡಿ, ದ್ವೇಷವನ್ನು ಸಾಧಿಸಲು ಇದು ಸರಿಯಾದ ಸಮಯ ಎಂದು ಏಕಾಏಕಿ ತಮ್ಮ ಕಾರಿನಿಂದ ವೀರಯ್ಯ ಅವರ ಬೈಕ್​ಗೆ ಗುದ್ದಿದ್ದಾರೆ. ತಮ್ಮ ಬಳಿಯಿದ್ದ ಸುತ್ತಿಗೆ ಮತ್ತು ಕೊಡಲಿಯಿಂದ ವೀರಯ್ಯ ಮೇಲೆ ಹಲ್ಲೆಗೈದಿದ್ದಾರೆ. ತಂದೆ ಸ್ಥಳದಲ್ಲೇ ಪ್ರಾಣಬಿಟ್ಟರೆ, ವೆಂಕಟೇಶ್​ ಸಣ್ಣಪುಟ್ಟ ಗಾಯಗಳಿಂದ ತಪ್ಪಿಸಿಕೊಂಡಿದ್ದಾರೆ.

ವೀರಯ್ಯ ಕಣ್ಣಿಗೆ ಪೆಪ್ಪರ್ ಸ್ಪ್ರೇ ಬಳಿದ ದುಷ್ಕರ್ಮಿಗಳು, ಸುತ್ತಿಗೆ ಮತ್ತು ಕೊಡಲಿಯಿಂದ ವೀರಯ್ಯ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ. ಈ ಪ್ರಕರಣ ಪೊಲೀಸ್​ ಠಾಣೆಯಲ್ಲಿ ದಾಖಲಾದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಮೃತ ವೀರಯ್ಯ ಕುಟುಂಬಸ್ಥರು ಆರೋಪಿಸಿ, ಕೊಲೆಗೈದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಪ್ರಸ್ತುತ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net