ಈತನ ಮುಂದೆ ವಿರಾಟ್, ರೋಹಿತ್​ ಏನೇನೂ ಅಲ್ಲ! ಮಾಜಿ ಸ್ಟಾರ್ ಕ್ರಿಕೆಟಿಗನ ಸ್ಪೋಟಕ ಹೇಳಿಕೆ ವೈರಲ್

WhatsApp Image 2024-05-07 at 12.54.53 PM
Published on

ಐಪಿಎಲ್​ 17ನೇ ಆವೃತ್ತಿಯ ಪಂದ್ಯಗಳು ಸಖತ್ ರೋಚಕವಾಗಿ ಮೂಡಿಬರುತ್ತಿದ್ದು, ಪ್ರತಿಯೊಂದು ಮ್ಯಾಚ್​ಗಳು ಸಹ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿದೆ. ಪಂದ್ಯ ವೀಕ್ಷಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂಗೆ ಬರುತ್ತಿರುವ ಅಭಿಮಾನಿಗಳು, ಪಂದ್ಯ ಮುಗಿದ ಬಳಿಕ ನಾವು ಕೊಟ್ಟ ಕಾಸಿಗೆ ಮೋಸ ಆಗಲಿಲ್ಲ, ಬದಲಿಗೆ ಅತ್ಯುತ್ತಮ ಕ್ರಿಕೆಟ್ ನೋಡಿದ್ದೇವೆ ಎಂದು ಸಂತಸದಿಂದ ಹೇಳುತ್ತಿದ್ದಾರೆ. ಇದೇ ಸಾಲಿಗೆ ನಿನ್ನೆ (ಮೇ.06) ನಡೆದ ಪಂದ್ಯವು ಸೇರ್ಪಡೆಯಾಗಿದೆ.

ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 7 ವಿಕೆಟ್​ಗಳ ಅಂತರದಿಂದ ಮುಂಬೈ ಎಸ್​ಆರ್​ಎಚ್​ ವಿರುದ್ದ ಭರ್ಜರಿ ಜಯ ಸಾಧಿಸಿತು. ಗೆದ್ದು ಪಂದ್ಯ ವಶಪಡಿಸಿಕೊಳ್ಳುವ ಮೂಲಕ ಹೈದರಾಬಾದ್​​​ ಕ್ಯಾಪ್ಟನ್​ ಪ್ಯಾಟ್​ ಕಮಿನ್ಸ್​ಗೆ ಭಾರೀ ಮುಖಭಂಗ ಉಂಟುಮಾಡಿದ ಎಂಐ, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ. ಈ ಪಂದ್ಯದಲ್ಲಿ ಆಕರ್ಷಕ ಬ್ಯಾಟ್​ ಮಾಡಿ, ತಂಡಕ್ಕೆ ಗೆಲುವು ತಂದುಕೊಟ್ಟಿದ್ದು, ಸೂರ್ಯಕುಮಾರ್​ ಯಾದವ್​.

ಸನ್​ರೈಸರ್ಸ್​ ಕೊಟ್ಟ 173 ರನ್​ ಗುರಿಯನ್ನು ಬೆನ್ನಟ್ಟಿದ ಮುಂಬೈನ ಸ್ಟಾರ್​ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಯಾದವ್​, ಕೇವಲ 51 ಎಸೆತಗಳಲ್ಲಿ 12 ಫೋರ್​ ಮತ್ತು 6 ಸಿಕ್ಸರ್​ ಸಿಡಿಸುವ ಮೂಲಕ ಅಜೇಯ 102 ರನ್​ ಗಳಿಸಿ, ತಂಡದ ಗೆಲುವಿಗೆ ಕಾರಣರಾದರು. ಸೂರ್ಯ ಅವರ ಸ್ಪೋಟಕ ಬ್ಯಾಟಿಂಗ್​ಗೆ ಫಿದಾ ಆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​, 'ಸ್ಕೈ' ಮುಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಏನೇನೂ ಅಲ್ಲ ಎಂದಿದ್ದಾರೆ.

"ರಾತ್ರಿಯಲ್ಲಿ ಬೆಳಗುವ ಏಕೈಕ ಸೂರ್ಯ ಈತ. ಸ್ಕೈಗೆ ಬೌಲಿಂಗ್ ಮಾಡುವುದು ಅಷ್ಟು ಸುಲಭವಲ್ಲ, ಮಾಡಿದ್ರೆ ಸಿಕ್ಸರ್​ ಬರುವುದು ಗ್ಯಾರಂಟಿ. ವಿರಾಟ್ ಮತ್ತು ರೋಹಿತ್ ಕೂಡ ಇವರ ಮುಂದೆ ಏನೇನೂ ಇಲ್ಲ. ಟಿ20 ಕ್ರಿಕೆಟ್​ನಲ್ಲಿ ಬೇರೆಯವರಿಗೆ ಹೋಲಿಕೆ ಮಾಡಿದರೆ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟರ್. ನಾನೇನಾದರೂ ಸೂರ್ಯಗೆ ಬೌಲ್ ಮಾಡುವ ಪರಿಸ್ಥಿತಿ ಇದ್ದಿದ್ದರೆ, ಖಂಡಿತವಾಗಿ ನಿರ್ಧರಿಸುವುದಕ್ಕೂ ಮೊದಲು ಮೂರು ಬಾರಿ ಯೋಚಿಸುತ್ತದೆ" ಎಂದು ಅಭಿಪ್ರಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅತ್ಯಧಿಕ ರನ್​ ಗಳಿಸುವ ಸ್ಪೋಟಕ ಬ್ಯಾಟ್ಸ್​ಮನ್​ಗಳು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಐಪಿಎಲ್​ ಹಾಗೂ ಭಾರತ ತಂಡಕ್ಕೂ ಆಡುತ್ತಿರುವ ಇವರಿಬ್ಬರು, ಪ್ರಸ್ತುತ ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಬಜ್ಜಿ ನೀಡಿದ ಹೇಳಿಕೆಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿರುವ ಕ್ರಿಕೆಟ್ ಫ್ಯಾನ್ಸ್​, ನಿಮ್ಮ ಅನಿಸಿಕೆ ನಿಮಗೇ ಇರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net