

Team India: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಇದೀಗ ಸಮಬಲದಲ್ಲಿ ಮುಕ್ತಾಯಗೊಂಡಿದ್ದು, ಭಾರತ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿತು. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ರೋಚಕ ಕೊನೆ ಪಂದ್ಯವನ್ನು ಭಾರತ 6 ರನ್‌ಗಳಿಂದ ಗೆದ್ದಿತು. ಇದರ ಬೆನ್ನಲ್ಲೇ ಈಗ ಕ್ರಿಕೆಟ್ ಪ್ರಿಯರ ಕಣ್ಣು ಟೀಮ್ ಇಂಡಿಯಾ ಎದುರಿಸಲಿರುವ ಮುಂದಿನ ಟೆಸ್ಟ್ ಸರಣಿ ಮೇಲೆ ಬಿದ್ದಿದೆ.
ಭಾರತವು ಡಬ್ಲ್ಯೂಟಿಸಿ 2025-27ರ ಭಾಗವಾಗಿ ನಡೆಯಲಿರುವ ಮುಂದಿನ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯವನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2ರಿಂದ 6 ರವರೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಅಕ್ಟೋಬರ್ 10ರಿಂದ 14 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಗೂ ಮೊದಲು, ಟೀಮ್ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ.
ಶುಭಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರದರ್ಶನ ನೀಡಿದ ತಂಡದ ಕೆಲವು ಆಟಗಾರರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಸಿಗುವುದು ಬಹುತೇಕ ಡೌಟ್ ಎನ್ನಲಾಗಿದೆ. ಅಷ್ಟಕ್ಕೂ ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ? ಎಂಬುದರ ವಿವರ ಹೀಗಿದೆ ನೋಡಿ.
ಕರುಣ್ ನಾಯರ್: 8 ವರ್ಷಗಳ ಬಳಿಕ ಇಂಗ್ಲೆಂಡ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಕರುಣ್ ನಾಯರ್, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದರು. ಇಂಗ್ಲೆಂಡ್ ಪ್ರವಾಸದಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ನಾಯರ್, 21.83 ಸರಾಸರಿಯಲ್ಲಿ ಕೇವಲ 205 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ. ನಿರ್ಣಾಯಕ ಮೂರನೇ ಸ್ಥಾನದಲ್ಲಿ ಹಲವು ಪಂದ್ಯಗಳಲ್ಲಿ ಆಡಿದರೂ, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಶಾರ್ದೂಲ್ ಠಾಕೂರ್: ಇಂಗ್ಲೆಂಡ್ ಪ್ರವಾಸಕ್ಕೆ ಅನಿರೀಕ್ಷಿತವಾಗಿ ಆಯ್ಕೆಯಾದ ಠಾಕೂರ್, ಎರಡು ಪಂದ್ಯಗಳನ್ನು ಆಡಿದರು. ಇದರಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಸರಣಿಯಲ್ಲಿ ಅವರ ಏಕೈಕ ಕೊಡುಗೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನೀಡಿದ 41 ರನ್.
ಅನ್ಶುಲ್ ಕಾಂಬೋಜ್: ಆಕಾಶ್ ದೀಪ್ ಮತ್ತು ಅರ್ಶ್ ದೀಪ್ ಸಿಂಗ್ ಗಾಯದಿಂದ ಬಳಲಿದ ಕಾರಣ, ವೇಗಿ ಅನ್ಶುಲ್ ಕಾಂಬೋಜ್ರನ್ನು ಸರಣಿಯ ಮಧ್ಯದಲ್ಲಿ ಅನಿರೀಕ್ಷಿತವಾಗಿ ಆಯ್ಕೆ ಮಾಡಲಾಯಿತು. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಅನ್ಶುಲ್, ಒಳ್ಳೆಯ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಸಿರಾಜ್, ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ತಂಡದಲ್ಲಿರುವುದರಿಂದ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರಿಗೆ ಸ್ಥಾನ ಸಿಗುವುದು ಬಹುತೇಕ ಅನುಮಾನ.
ಜಸ್ಪ್ರೀತ್ ಬುಮ್ರಾ: ಪ್ರಸ್ತುತ, ಬುಮ್ರಾ ವರ್ಕ್ಲೋಡ್ ಕಾರಣದಿಂದ ವಿಶ್ರಾಂತಿಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ ಬುಮ್ರಾ, ನಂತರದಲ್ಲಿ ವಿಶ್ರಾಂತಿ ತೆಗೆದುಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ತವರಿನಲ್ಲಿ ಆಡುತ್ತಿರುವುದರಿಂದ ಹಾಗೂ ವೆಸ್ಟ್ ಇಂಡೀಸ್ ಸರಣಿ ಬಳಿಕ ಉಳಿದ ಹಲವಾರು ಪ್ರಮುಖ ಸರಣಿಗಳು ಇರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು, ಬುಮ್ರಾಗೆ ರೆಸ್ಟ್ ಕೊಡುವ ಸಾಧ್ಯತೆಗಳೇ ಹೆಚ್ಚಿವೆ.
ನಿತೀಶ್ ಕುಮಾರ್ ರೆಡ್ಡಿ: ಜಿಮ್ ಸೆಷನ್‌ನಲ್ಲಿ ಗಾಯಗೊಂಡ ನಿತೀಶ್ ಕುಮಾರ್ ರೆಡ್ಡಿ ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ತವರಿಗೆ ಹಿಂತಿರುಗಿದರು. ಅವರ ಚೇತರಿಕೆಗೆ ಒಂದಷ್ಟು ಸಮಯದ ಅಗತ್ಯವಿದೆ. ಹೀಗಾಗಿ ಅವರನ್ನೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕರೆದುಕೊಳ್ಳುವುದು ಅನುಮಾನ. ಈ ಬಗ್ಗೆ ಬಿಸಿಸಿಐ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಿಷಭ್ ಪಂತ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿವರ್ಸ್ ಸ್ವೀಪ್ ಶಾಟ್ ಆಡುವಾಗ ಪಂತ್ ಗಾಯಗೊಂಡರು. ಅವರ ಎಡಗಾಲಿನ ಹೆಬ್ಬೆರಳು ಮುರಿದಿದೆ ಎಂದು ವರದಿಯಾಗಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಇನ್ನೂ ಎರಡು ತಿಂಗಳು ಬಾಕಿ ಉಳಿದಿದೆ. ಆ ಹೊತ್ತಿಗೆ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆಯೇ? ಎಂಬುದು ಪ್ರಶ್ನೆ. ಆದಾಗ್ಯೂ, ದಕ್ಷಿಣ ಆಫ್ರಿಕಾದೊಂದಿಗೆ ನಿರ್ಣಾಯಕ ಸರಣಿ ಕೂಡ ಇದೆ. ಈ ಸಂದರ್ಭದಲ್ಲಿ, ವೆಸ್ಟ್ ಇಂಡೀಸ್ ಸರಣಿಗೆ ಪಂತ್ಗೆ ಅವಕಾಶ ನೀಡುವ ಬದಲು ವಿಶ್ರಾಂತಿ ಕೊಡುವ ಸಾಧ್ಯತೆಗಳು ಹೆಚ್ಚು,(ಏಜೆನ್ಸೀಸ್).