

Kavya Maran: ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡತಿ ಕಾವ್ಯ ಮಾರನ್ ವಿರುದ್ಧ ಸದ್ಯ ಭಾರತೀಯ ಕ್ರಿಕೆಟ್ ಪ್ರೇಮಿಗಳು ತೀವ್ರ ಕಿಡಿಕಾರಿದ್ದಾರೆ. ಕಾವ್ಯ ನೇತೃತ್ವದ ಸನ್ ಗ್ರೂಪ್, ಇಂಗ್ಲೆಂಡ್‌ನಲ್ಲಿ ನಡೆಯುವ ಹಂಡ್ರೆಡ್ ಲೀಗ್‌ನಲ್ಲಿ 'ನಾರ್ದರ್ನ್ ಸೂಪರ್ ಚಾರ್ಜರ್ಸ್' ಫ್ರಾಂಚೈಸಿಯನ್ನು ಮುನ್ನಡೆಸಲಿದೆ. ಈ ತಂಡಕ್ಕೆ ಇಬ್ಬರು ಪಾಕಿಸ್ತಾನಿ ಕ್ರಿಕೆಟಿಗರನ್ನು ಆಯ್ಕೆ ಮಾಡಿಕೊಂಡಿರುವುದೇ ಸದ್ಯ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಸನ್ ಗ್ರೂಪ್ ಈ ಫ್ರಾಂಚೈಸಿಯ ಸಂಪೂರ್ಣ ಪಾಲನ್ನು 1,094 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ. ಹಂಡ್ರೆಡ್ ಲೀಗ್‌ನ 8 ಫ್ರಾಂಚೈಸಿಗಳಲ್ಲಿ ನಾಲ್ಕನ್ನು ಭಾರತೀಯ ಕಂಪನಿಗಳು (ಐಪಿಎಲ್ ಫ್ರಾಂಚೈಸ್ ಮಾಲೀಕರು ಸೇರಿದಂತೆ) ಖರೀದಿಸಿದರೆ, ಉಳಿದ ಎರಡು ಫ್ರಾಂಚೈಸಿಗಳನ್ನು ಭಾರತೀಯ-ಅಮೆರಿಕನ್ ಹೂಡಿಕೆದಾರರು ತಮ್ಮದಾಗಿಸಿಕೊಂಡಿದ್ದಾರೆ.
ಕಾವ್ಯ ಮಾರನ್ ಒಡೆತನದ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಇಂದಿನಿಂದ (ಆಗಸ್ಟ್ 5) ಪ್ರಾರಂಭವಾಗಲಿರುವ 2025ರ ಹಂಡ್ರೆಡ್ ಲೀಗ್ ಆವೃತ್ತಿಗೆ ಇಬ್ಬರು ಮಾಜಿ ಪಾಕಿಸ್ತಾನಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಬೆನ್ ದ್ವಾರಶುಯಿಸ್ (ಆಸ್ಟ್ರೇಲಿಯಾ) ಮತ್ತು ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್) ಬದಲಿಗೆ ಮಾಜಿ ಪಾಕಿಸ್ತಾನಿ ಆಟಗಾರರಾದ ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸಿಮ್ರನ್ನು ಆಯ್ಕೆ ಮಾಡಿದ್ದಕ್ಕಾಗಿ ಇದೀಗ ಫ್ರಾಂಚೈಸಿ ಹಾಗೂ ಕಾವ್ಯ ವಿರುದ್ಧ ಜಾಲತಾಣಗಳಲ್ಲಿ ಟ್ರೋಲ್, ಟೀಕೆಗಳು ಜೋರಾಗಿವೆ.
ಈ ಆವೃತ್ತಿಗೂ ಮೊದಲು, ಭಾರತೀಯ ಹೂಡಿಕೆದಾರರು ಹೆಚ್ಚಿನ ಫ್ರಾಂಚೈಸಿಗಳನ್ನು ಸ್ವಾಧೀನಪಡಿಸಿಕೊಂಡಿದ್ದರಿಂದ ಯಾವುದೇ ಪಾಕಿಸ್ತಾನಿ ಆಟಗಾರರಿಗೆ ಹರಾಜಿನಲ್ಲಿ ಅವಕಾಶ ಇರಲಿಲ್ಲ. ಫ್ರಾಂಚೈಸಿಗಳು ಪರೋಕ್ಷವಾಗಿ ಪಾಕಿಸ್ತಾನಿ ಆಟಗಾರರನ್ನು ನಿಷೇಧಿಸಿದ್ದವು. ಆದರೀಗ, 'ನಾರ್ದರ್ನ್ ಸೂಪರ್ ಚಾರ್ಜರ್ಸ್', ಪಾಕಿಸ್ತಾನಿ ಕ್ರಿಕೆಟಿಗರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಸದ್ಯ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಕೆರಳಿಸಿದೆ,(ಏಜೆನ್ಸೀಸ್).