

Suvendu Adhikari: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬೆಂಗಾವಲು ಪಡೆಯ ವಾಹನಗಳ ಮೇಲೆ ಮಂಗಳವಾರ(ಆಗಸ್ಟ್ 5) ಕೋಚ್ಬೆಹರ್ನಲ್ಲಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ವರದಿಯಾಗಿದೆ.
ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಕೋಚ್ ಬೆಹರ್ನಲ್ಲಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನಾ ಱಲಿಯ ನೇತೃತ್ವ ವಹಿಸಿಕೊಳ್ಳಲು ತೆರಳುತ್ತಿದ್ದಾಗ ಅವರ ಬೆಂಗಾವಲು ವಾಹನಗಳ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕರ ಮೇಲೆ ದಾಳಿಗಳು ಹೆಚ್ಚಾಗುತ್ತಿದ್ದು, ಅದರ ವರದಿ ಸಲ್ಲಿಸಲು ನಿಯೋಗದೊಂದಿಗೆ ಕೋಚ್ ಬೆಹರ್ ಎಸ್ಪಿ ಕಚೇರಿಗೆ ತೆರಳಲು ಪ್ರತಿಭಟನಾ ಱಲಿ ಆಯೋಜಿಸಿದ್ದರು. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಹ ಅದೇ ಪ್ರದೇಶದಲ್ಲಿ ಬಿಜೆಪಿಗೆ ಪ್ರತಿಯಾಗಿ ಪ್ರತಿಭಟನೆ ಆಯೋಜಿಸಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಸುವೇಂದು ಅಧಿಕಾರಿ ರಸ್ತೆಯಲ್ಲಿ ಬರುತ್ತಿದ್ದಂತೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿ ಟಿಎಂಸಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇದೇ ವೇಳೆ ಅಧಿಕಾರಿಯವರ ಬೆಂಗಾವಲು ಕಾರುಗಳ ಮೇಲೆ ಇಟ್ಟಿಗೆ, ಕಲ್ಲುಗಳ ತೂರಾಟ ನಡೆದಿದೆ. ಟಿಎಂಸಿ ಕಾರ್ಯಕರ್ತರೇ ದಾಳಿ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ಸುವೇಂದು ಅದಿಕಾರಿ, "ನಾನು ಬುಲೆಟ್ ಪ್ರೂಫ್ ವಾಹನದಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಟಿಎಂಸಿ ಶಾಸಕ ಉದಯನ್ ಗುಹಾ, ಬಾಂಗ್ಲಾದೇಶಿ ರೋಹಿಂಗ್ಯಾಗಳನ್ನು ಕರೆತಂದು ದಾಳಿ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯೊಂದಿಗೆ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಂದಿದ್ದೆ. ವಾಹನದ ಗಾಜನ್ನು ಇಟ್ಟಿಗೆಗಳಿಂದ ಒಡೆದಿದ್ದಾರೆ. ನನ್ನನ್ನು ಕೊಲ್ಲಲು ಪ್ರಯತ್ನಿಸಲಾಗಿದೆ" ಎಂದು ಆರೋಪಿಸಿದರು.
ಸುವೇಂದು ಆರೋಪಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಶಾಸಕ ಉದಯನ್ ಗುಹಾ, "ಬಿಜೆಪಿ ಕಾರ್ಯಕರ್ತರೇ ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆ. ಟಿಎಂಸಿ ಯಾವುದೇ ರೀತಿಯ ದಾಳಿ ಮಾಡಿಲ್ಲ. ಬಿಜೆಪಿಯವರು ಬಂಗಾಳವನ್ನು ಅವಮಾನಿಸಿದರೆ ಸುಮ್ಮನೆ ಬಿಡುವುದಿಲ್ಲ, ಅವರೂ ಎಲ್ಲಿಗೆ ಹೋದರು ಕಪ್ಪು ಬಟ್ಟೆಯನ್ನು ಪ್ರದರ್ಶನ ಮಾಡ್ತೇವೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)