

Rahul Gandhi: ಮತಗಳ್ಳತನ ಆರೋಪವನ್ನು ಮುಂದುರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾಭಣೆಯಲ್ಲಿ ಗೆಲುವು ಸಾಧಿಸಲು ಪ್ರಧಾನಿ ಮೋದಿ ಮತಗಳ್ಳತನದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ಹೈಡ್ರೋಜನ್ ಬಾಂಬ್ ಅನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಶನಿವಾರ (ಸೆ. 20) ಹೇಳಿದ್ದಾರೆ.
ಕೇರಳದ ವಯನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಮತಗಳ್ಳತನದ ಬಗ್ಗೆ ಯಾರಿಗೂ ಸಂದೇಹವಿರದಂತಹ ಹೈಡ್ರೋಜನ್ ಬಾಂಬ್ ಅನ್ನು ಬಹಿರಂಗಪಡಿಸುತ್ತೇನೆ. ಅದು ಹೀಗಿರುವ ಇಡೀ ವಾಸ್ತವತೆಯನ್ನು ಛಿದ್ರಗೊಳಿಸುತ್ತದೆ ಎಂದು ಹೇಳಿದ್ದಾರೆ.
ನಾವು ಹೇಳುತ್ತಿರುವ ವಿಷಯಕ್ಕೆ ನಮ್ಮಲ್ಲಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ. ನೀವು ನನ್ನ ಮೊದಲ ಮತ್ತು ಎರಡನೇ ಪತ್ರಿಕಾಗೋಷ್ಠಿಗಳನ್ನು ನೋಡಿದ್ದೀರಿ. ನಮ್ಮಲ್ಲಿ ಬ್ಲಾಕ್ ಅಂಡ್ ವೈಟ್ ಪುರಾವೆಗಳಿವೆ. ಪುರಾವೆ ಇಲ್ಲದೆ ನಾವು ಏನನ್ನೂ ಹೇಳುತ್ತಿಲ್ಲ. ನಡೆದಿರುವ ಹಲವಾರು ವಿಷಯಗಳ ಬಗ್ಗೆ ನಮ್ಮಲ್ಲಿ 100% ಪುರಾವೆಗಳಿವೆ ಮತ್ತು ಇವು ಶೀಘ್ರದಲ್ಲೇ ಹೊರಬರಲಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕೂ ನಿಮ್ಮ ಹೈಡ್ರೋಜನ್ ಬಾಂಬ್ಗೆ ಸಂಬಂಧವಿದೆಯೇ ಎಂದು ವರದಿಗಾರರೂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನೀವು ಊಹಿಸಬಹುದು, ಮಾಧ್ಯಮಗಳಿಗೆ ಬಿಟ್ಟಿದ್ದೇನೆ. ನಾನು ನನ್ನ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಆಳಂದ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ "ಮತ ಕಳ್ಳತನ" ಆರೋಪಗಳ ಬಗ್ಗೆ ಕರ್ನಾಟಕದಲ್ಲಿ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಯುತ್ತಿದೆ. ಈ ಮತಗಳ್ಳತ ನಡೆಸಲು ಬಳಸಲಾದ ಫೋನ್ ಸಂಖ್ಯೆಗಳ ಬಗ್ಗೆ ಸಿಐಡಿ ಮಾಹಿತಿಯನ್ನು ಕೇಳಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಮಾಹಿತಿಯನ್ನು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)