

ಕೋಟ: ಸನಾತನ ಧರ್ಮದಲ್ಲಿ ಸತ್ಕಾರ್ಯಗಳಿಗೆ ಮನ್ನಣೆ ಇದೆ. ಪ್ರತೀ ಮನೆ ಮನೆಗಳ ಒಂದೊಂದು ಮಗುವಿನ ಹೃದಯದಲ್ಲೂ ಕಲೆ ಇರುತ್ತದೆ. ಹಲವು ಮಕ್ಕಳು ಜನ್ಮತಃ ಕಲಾವಿದರಾಗಿರುತ್ತಾರೆ. ಅವರನ್ನು ಹೊರ ಪ್ರಪಂಚಕ್ಕೆ ತೋರಿಸುವುದಕ್ಕೆ ಇಂತಹ ಸಂಸ್ಥೆ ಬೇಕು, ಗುರುಗಳು ಬೇಕು ಎಂದು ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿ ಲೋಗೇಶ ಅಡಿಗ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಯಕ್ಷಗಾನ ಕೇಂದ್ರದ ಆರು ತಿಂಗಳುಗಳ ಕಾಲದ ಯಕ್ಷಗಾನ ತರಗತಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಕೆ.ಪಿ.ಹೆಗಡೆ ಮಾತನಾಡಿ, ಒಂದು ತರಗತಿ ಕೇಂದ್ರ ನಡೆಸುವುದು ಎಷ್ಟು ಕಷ್ಟ ಎಂಬುದು ತಿಳಿದವರಿಗಷ್ಟೇ ಗೊತ್ತು. ಸಂಸ್ಥೆಗೆ ಬೆನ್ನೆಲುಬಾಗಿ ಗುರುಗಳು, ಶಿಷ್ಯರೂ ಜೊತೆಯಾದಾಗ ಸಂಸ್ಥೆ ಮುಂದುವರಿಯಲು ಸಾಧ್ಯ ಎಂದರು.
ಯಕ್ಷಗಾಭಿವಾನಿ ಆ್ಯಂಡ್ರೂ ಡಿಸಿಲ್ವ, ಪ್ರಾಂಶುಪಾಲ ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ ಮಾತನಾಡಿದರು.
ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿಣಿತ ವೈದ್ಯ ಸ್ವಾಗತಿಸಿದರು. ಪಂಚಮಿ, ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.