

ಕುಂದಾಪುರ: ವಂಡ್ಸೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.
ಸಂಗೀತ ವಾದ್ಯಗಳ ಘೋಷದೊಂದಿಗೆ ಪುಷ್ಪವೃಷ್ಟಿಯ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಪಂ ವತಿಯಿಂದ ನೀಡಿದ ಹೊಸ ಸೈಕಲ್ನಲ್ಲಿ ಸವಾರಿ ಮಾಡಿಸುವುದರ ಮೂಲಕ ಪುಟಾಣಿಗಳು ಶಾಲಾ ಆವರಣ ಪ್ರವೇಶಿಸಿದರು.
ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭ ಹಾರೈಸಿದರು. ವಂಡ್ಸೆ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಿದರು. ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜೀವ, ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶಾಲೆ ಪ್ರಭಾರ ಮುಖ್ಯಶಿಕ್ಷಕ ಸೋಮರಾಯ ಜನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ನಾಗವೇಣಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಜ್ಞಾನ ಶಿಕ್ಷಕ ಸುಧಾಕರ್ ಮರಕಾಲ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ಕಾರ್ಯಕ್ರಮ ನಿರೂಪಿಸಿದರು.