ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಜಾರಿಯಲ್ಲಿದೆ : ದಿನೇಶ್ ಗುಂಡೂರಾವ್

dinesh
Published on

ಬೆಂಗಳೂರು : ಸರ್ಕಾರ‌ ತನ್ನ ವೈಫಲ್ಯಗಳನ್ನು ಮರೆಮಾಚಲು ಲಾಕ್‌ಡೌನ್ ಎಂದು ಘೋಷಿಸಿಲ್ಲ. ಆದರೆ ರಾಜ್ಯದಲ್ಲಿ ಅಘೋಷಿತ ಲಾಕ್‌ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ದಿನದ ದುಡಿಮೆ ನಂಬಿ ಬದುಕುವವರು ಏನು ಮಾಡಬೇಕು ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

"ಜನವಿರೋಧಿ ನೀತಿಯನ್ನು ಇಂದು ರಾಜ್ಯ ಸರ್ಕಾರ ಪಾಲಿಸ್ತಾ ಇದೆ. ಒಂದು ಕಡೆ ಲಾಕ್​ಡೌನ್ ಅಂತ ಹೇಳ್ತಾ ಇಲ್ಲ. ಆದರೆ ಇದು ಅಘೋಷಿತ ಲಾಕ್​ಡೌನ್ ಎಂದು ಗೋಚರವಾಗ್ತಾ ಇದೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

"ಮದ್ಯದ ಅಂಗಡಿಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದೇನು ಅಗತ್ಯ ವಸ್ತುನಾ ? ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ ಅಂಗಡಿ, ಮೊಬೈಲ್ ಅಂಗಡಿ ಯಾಕೆ ತೆರೀಬಾರ್ದು ? ರೆಸ್ಟೊರೆಂಟ್​ ನಡೆಸಬಹುದು ಅಂತಾರೆ. ಆದರೆ ಪಾರ್ಸಲ್ ಮಾತ್ರ ಕೊಡಬಹುದು ಅಂತಾರೆ. ಬರೀ ಪಾರ್ಸಲ್ ಕೊಟ್ಟು ನಡೆಸೋಕಾಗುತ್ತಾ ?" ಎಂದು ರಾಜ್ಯ ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ವರ್ತಕರು, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯ, ಸಣ್ಣ ಉದ್ಯಮಿಗಳೊಂದಿಗೆ ಸಭೆ‌ ನಡೆಸಿ ಅವರ ಅಭಿಪ್ರಾಯ ತೆಗೆದುಕೊಂಡು, ಅವರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net