More

    ಭಾರತೀಯರಿಗೇ ಅತ್ಯಂತ ದುಬಾರಿಯಾಗಲಿದೆ… ಈ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆ !

    ನವದೆಹಲಿ : ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ(ಎಸ್​ಐಐ) ಭಾರತದಲ್ಲೇ ಉತ್ಪಾದಿಸುತ್ತಿರುವ ಕೋವಿಶೀಲ್ಡ್​ ಕರೊನಾ ಲಸಿಕೆಗೆ ಇದೀಗ ಭಾರತೀಯರೇ ಹೆಚ್ಚು ಹಣ ನೀಡಿ ಪಡೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ವಿಪರ್ಯಾಸವೆಂದರೆ ಜಗತ್ತಿನ ಹಲವು ಇತರ ರಾಷ್ಟ್ರಗಳಿಗೆ ಅದೇ ಲಸಿಕೆ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗಿದೆ.

    ಇಂಗ್ಲೆಂಡ್​ನ ಆಸ್ಟ್ರಾಜೆನೆಕಾ ಮತ್ತು ಯೂನಿವರ್ಸಿಟಿ ಆಫ್ ಆಕ್ಸ್​ಫರ್ಡ್ ರೂಪಿಸಿರುವ ಕರೊನಾ ಲಸಿಕೆಯನ್ನು ಭಾರತದಲ್ಲಿ ಎಸ್​ಐಐ ಕಂಪೆನಿ ಕೋವಿಶೀಲ್ಡ್​ ಎಂಬ ಹೆಸರಲ್ಲಿ ಒದಗಿಸುತ್ತಿರುವುದು ಸರಿಯಷ್ಟೆ. ಈ ಲಸಿಕೆಯನ್ನು ಭಾರತ ಸರ್ಕಾರಕ್ಕೆ ಈವರೆಗೆ ಒಂದು ಡೋಸ್​ಗೆ 150 ರೂಪಾಯಿಯ ಬೆಲೆಯಲ್ಲಿ ಕಂಪೆನಿ ಒದಗಿಸುತ್ತಿತ್ತು. ಇದೀಗ ಲಸಿಕಾ ಅಭಿಯಾನದ ವೇಗ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಶೇ. 50 ರಷ್ಟು ಉತ್ಪಾದನೆಯನ್ನು ಹೆಚ್ಚಿನ ಬೆಲೆಗೆ ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಲು ಅನುಮತಿ ನೀಡಿದೆ. ಹೀಗೆ ಮಾರುವ ಡೋಸ್​ಗಳಿಗೆ ಕಂಪೆನಿಯು ತಾನೇ ಬೆಲೆ ನಿಗದಿ ಮಾಡುವ ಅವಕಾಶ ನೀಡಿದೆ.

    ಇದನ್ನೂ ಓದಿ: ಕೋವಿಶೀಲ್ಡ್​ : ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 400 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ದುಬಾರಿ !

    ಮೇ 1 ರಿಂದ ತಾನು ಪೂರೈಸಲಿರುವ ಲಸಿಕೆಗಳಿಗೆ ಎಸ್​ಐಐ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 400 ರೂಪಾಯಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್​ಗೆ 600 ರೂ. ಗಳಂತೆ ಬೆಲೆ ನಿಗದಿ ಮಾಡಿದೆ. ಇದೇ ದರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕಾದಲ್ಲಿ ಭಾರತೀಯರು ಈ ಲಸಿಕೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಹಣ ನೀಡುವ ಜನರಾಗಲಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

    ಏಕೆಂದರೆ ರೂ. 600 ಅಂದರೆ ಸುಮಾರು 8 ಡಾಲರ್​ನಷ್ಟು ಮತ್ತು ರೂ. 400 ಎಂದರೆ 5.30 ಡಾಲರ್ ಬೆಲೆ ನೀಡಿದ ಹಾಗಾಗುತ್ತದೆ. ಆದರೆ ಅದೇ ಆಸ್ಟ್ರಾಜೆನೆಕಾ ಕಂಪೆನಿ ಈ ಲಸಿಕೆಯನ್ನು ಇಂಗ್ಲೆಂಡ್​​ನಲ್ಲಿ 3 ಡಾಲರ್​​ಗೆ ನೀಡುತ್ತಿದೆ. ಯುರೋಪಿಯನ್ ಯೂನಿಯನ್​ನ ದೇಶಗಳು 2.15-3.50 ಡಾಲರ್​ ಬೆಲೆ ನೀಡುತ್ತಿದ್ದರೆ, ಬ್ರೆಜಿಲ್ 3.15 ಡಾಲರ್ ಮತ್ತು ಅಮೆರಿಕಾ 4 ಡಾಲರ್ ನೀಡುತ್ತಿವೆ. ಬಾಂಗ್ಲಾದೇಶಕ್ಕೆ 4 ಡಾಲರ್ ಬೆಲೆಗೆ ನೀಡಲು ಖುದ್ದು ಎಸ್​ಐಐ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಇನ್ನು ಸ್ವಲ್ಪ ಹೆಚ್ಚು ಬೆಲೆಯೆಂದರೆ ಸೌದಿ ಅರೇಬಿಯಾ ಮತ್ತು ಸೌತ್ ಆಫ್ರಿಕಾ ನೀಡುತ್ತಿರುವ 5.25 ಡಾಲರ್​ ಬೆಲೆ.

    ಇದನ್ನೂ ಓದಿ: ಕರೊನಾ ಲಸಿಕೆ, ಆಮ್ಲಜನಕ ಉಪಕರಣ : ಆಮದು ಶುಲ್ಕ ವಿನಾಯಿತಿ

    ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾರತ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಎಸ್​ಐಐ ಸಿಇಒ ಆಡಾರ್ ಪೂನಾವಾಲಾ ಅವರು ಈ ಮುನ್ನ ಡೋಸ್​ಗೆ 150 ರೂ. ಬೆಲೆಯಲ್ಲೂ ನಾವು ಲಾಭ ಮಾಡಬಲ್ಲೆವು ಎಂದಿದ್ದರು ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು, ಕರೊನಾ ಲಸಿಕೆಯನ್ನು ಖರೀದಿಲು ಭಾರತ ಸರ್ಕಾರ ನೀಡುವ ದರವು ಎರಡೂ ಲಸಿಕೆಗಳಿಗೆ (ಕೋವಿಶೀಲ್ಡ್ ಮತ್ತು ಕೋವಾಕ್ಸಿನ್) 150 ರೂ. ನಷ್ಟೇ ಇರಲಿದೆ. ಈ ರೀತಿಯಾಗಿ ಖರೀದಿಸಿದ ಲಸಿಕೆಗಳನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿಯೇ ನೀಡುವುದನ್ನು ಸರ್ಕಾರ ಮುಂದುವರಿಸಲಿದೆ ಎಂದು ಟ್ವೀಟ್ ಮಾಡಿದೆ. ಗಮನಿಸಬೇಕಾದ ಅಂಶವೆಂದರೆ ಈ ದರದಲ್ಲಿ ಎಸ್​ಐಐ ಉತ್ಪಾದಿಸುವ ಶೇ.50 ರಷ್ಟು ಲಸಿಕೆಗಳನ್ನು ಮಾತ್ರ ಕೇಂದ್ರ ಸರ್ಕಾರ ಖರೀದಿಸಲಿದೆ. (ಏಜೆನ್ಸೀಸ್)

    ‘ಮೇನಲ್ಲಿ ಪೀಕ್​ ತಲುಪಲಿದೆ, ಅದಕ್ಕೆ ಸಿದ್ಧತೆ ಏನು ?’ – ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ಆಕ್ಸಿಜನ್ ಕೊರತೆ : ಖಾಸಗಿ ಆಸ್ಪತ್ರೆಯಲ್ಲಿ 6 ರೋಗಿಗಳ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts