More

    ಕೋವಿಶೀಲ್ಡ್​ : ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 400 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ದುಬಾರಿ !

    ನವದೆಹಲಿ : ಕೋವಿಶೀಲ್ಡ್​ ಕರೊನಾ ಲಸಿಕೆಯ ಬೆಲೆಯು ಪ್ರತಿ ಡೋಸ್​ಗೆ ರಾಜ್ಯ ಸರ್ಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ನಿಗದಿಪಡಿಸಲಾಗಿದೆ. ಈ ಕುರಿತು ಲಸಿಕೆಯ ಉತ್ಪಾದಕರಾದ ಸೀರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ(ಎಸ್​​ಐಐ) ಕಂಪೆನಿ ಇಂದು ಪ್ರಕಟಣೆ ನೀಡಿದೆ. ಭಾರತದಲ್ಲಿ ಲಭ್ಯವಿರುವ ಮತ್ತೊಂದು ಕರೊನಾ ಲಸಿಕೆಯಾದ ಭಾರತ್​ ಬಯೋಟೆಕ್​​ನ ಕೋವ್ಯಾಕ್ಸಿನ್ ಲಸಿಕೆಯ ದರವನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ.

    ಮೇ 1 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕರೊನಾ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ನೀಡಬಹುದೆಂದು ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಲಸಿಕೆ ಉತ್ಪಾದಕರಿಗೆ ದರ ನಿಗದಿಪಡಿಸುವ ಸ್ವಾತಂತ್ರ್ಯ ನೀಡಿತ್ತು. ಉತ್ಪಾದನೆಯಾದ ಶೇ. 50 ರಷ್ಟು ಲಸಿಕೆಗಳನ್ನು ಕಂಪೆನಿಯು ರಾಜ್ಯ ಸರ್ಕಾರಗಳಿಗೆ, ಖಾಸಗಿ ಆಸ್ಪತ್ರೆಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ನೇರ ಮಾರಾಟ ಮಾಡಬಹುದು ಎಂದು ಸರ್ಕಾರ ಹೇಳಿತ್ತು.

    ಇದನ್ನೂ ಓದಿ: 50:50 ಲಸಿಕೆ ಹಂಚಿಕೆ; ಸರ್ಕಾರಿ ಕೇಂದ್ರಗಳಲ್ಲಿ ಯಥಾಸ್ಥಿತಿ, ಖಾಸಗಿ ಕೇಂದ್ರಗಳಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ಲಭ್ಯ!

    ಇದೀಗ ಎಸ್​​ಐಐ ತನ್ನ ಲಸಿಕೆಯ ದರವನ್ನು ನಿಗದಿ ಮಾಡಿದ್ದು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅರ್ಧದಷ್ಟು ಉತ್ಪಾದನೆಯನ್ನು ಒದಗಿಸುವುದಾಗಿ ತಿಳಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಖಾಸಗಿ ಸಂಸ್ಥೆಗೆ ಲಸಿಕೆ ಪೂರೈಸುವುದು ಕಷ್ಟವಾಗುತ್ತದೆ ಎಂದಿರುವ ಕಂಪೆನಿ, ನೇರ ಮಾರುಕಟ್ಟೆಯಲ್ಲಿ ರೀಟೇಲ್​ ಮಾರಾಟಕ್ಕೆ ಇನ್ನೂ 4-5 ತಿಂಗಳ ನಂತರ ವ್ಯವಸ್ಥೆ ಮಾಡಲಾಗುವುದು ಎಂದಿದೆ.

    ಖಾಸಗಿ ಮಾರುಕಟ್ಟೆಗಳಲ್ಲಿ, ಅಮೇರಿಕನ್ ಲಸಿಕೆಗಳು 1500 ರೂ. ಗಿಂತ ಹೆಚ್ಚು ಬೆಲೆ ಹೊಂದಿವೆ. ರಷಿಯನ್ ಲಸಿಕೆಗಳು ಮತ್ತು ಚೈನೀಸ್ ಲಸಿಕೆಗಳು 750 ರೂ. ಗಿಂತ ಹೆಚ್ಚು ಬೆಲೆ ಹೊಂದಿವೆ. ಅವಕ್ಕಿಂತ ಕಡಿಮೆ ದರದಲ್ಲಿ ನಮ್ಮ ಲಸಿಕೆಗಳನ್ನು ನೀಡಲಿದ್ದೇವೆ ಎಂದು ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಆಡಾರ್ ಸಿ.ಪೂನಾವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈ ದರದ ಮೇಲೆ ಖಾಸಗಿ ಆಸ್ಪತ್ರೆಗಳು ಇನ್ನೂ ಹೆಚ್ಚಿನ ಹಣ ಪಡೆಯಲು ನಿರ್ಧಾರ ಮಾಡಲಿವೆಯೇ ? ಹಾಗೆ ನಿರ್ಧರಿಸಿದಲ್ಲಿ ಲಸಿಕೆಯ ಬೆಲೆಯು ಎಷ್ಟು ರೂಪಾಯಿಗೆ ತಲುಪುವುದು ಎಂದು ಇನ್ನೂ ಕಾದುನೋಡಬೇಕಾಗಿದೆ. ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ಪಡೆಯುವ ಸೌಲಭ್ಯ ಮುಂದುವರಿಯಲಿದೆ. (ಏಜೆನ್ಸೀಸ್)

    ನಮ್ಮ ಆಸ್ಪತ್ರೆಗಳಿಗೆ ಹೊರಟ ಆಕ್ಸಿಜನ್ಅನ್ನು ದೆಹಲಿ ಸರ್ಕಾರ ಕದ್ದಿದೆ : ಹರಿಯಾಣ ಸಚಿವರ ಆರೋಪ

    ದೇವಸ್ಥಾನದಲ್ಲಿ ಸಿಕ್ಕಿತು ಪೂಜಾರಿಗಳ ತಲೆ ಕಡಿದ ದೇಹ ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts