

ಪಟ್ನ : ಇಬ್ಬರು ಪೂಜಾರಿಗಳ ತಲೆ ತೆಗೆದ ಮೃತ ದೇಹಗಳು ಇಂದು ಬಿಹಾರದ ಮಧುಬಾನಿ ಜಿಲ್ಲೆಯ ಧರೋಹರ ಮಹಾದೇವ ದೇವಸ್ಥಾನದಲ್ಲಿ ಸಿಕ್ಕಿದೆ. ಈ ಕೃತ್ಯ ಎಸಗಿರುವ ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದು, ಅಪರಾಧದ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಮೃತರನ್ನು ಮಧುಬಾನಿ ಜಿಲ್ಲೆಯ ಸಿರಿಯಾಪುರದ ನಿವಾಸಿ ಹೀರಾನಂದ್ ದಾಸ್ (65 ವರ್ಷ) ಮತ್ತು ಭಗವಾನ್ಪುರದ ಆನಂದ್ ಮಿಶ್ರ (45 ವರ್ಷ) ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಚೂಪಾದ ವಸ್ತುವಿನಿಂದ ಸಾಯಿಸಿದ್ದು, ಅವರ ತಲೆಗಳನ್ನು ದೇಹಗಳಿಂದ ಬೇರ್ಪಡಿಸಲಾಗಿತ್ತು ಎಂದು ಪ್ರಕರಣ ದಾಖಲಿಸಿರುವ ಖಿರ್ಹರ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅಂಜೇಶ್ ಕುಮಾರ್ ತಿಳಿಸಿದ್ದಾರೆ.
ಈ ಬರ್ಬರ ಹತ್ಯೆಗಳು ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ವಿವಿಧ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)