More

    ಕೊಡಗಿನಲ್ಲೂ ಇ-ಪಾಸ್ ನಿಯಮ ಜಾರಿಗೆ ಚರ್ಚೆ

    ಮಡಿಕೇರಿ:

    ದಕ್ಷಿಣ ಭಾರತದ ಪ್ರಖ್ಯಾತ ಗಿರಿಧಾಮ ಊಟಿಗೆ ಈ ಟೂರಿಸ್ಟ್ ಸೀಸನ್‌ನಲ್ಲಿ ಸರಾಸರಿ ೧೧,೫೦೯ ಕಾರುಗಳು, ೧,೩೪೧ ವ್ಯಾನ್‌ಗಳು, ೬೩೭ ಬಸ್‌ಗಳು ಹಾಗೂ ೬,೫೨೪ ದ್ವಿಚಕ್ರ ವಾಹನಗಳು ಆಗಮಿಸುತ್ತವೆ. ಸೀಸನ್ ಹೊರತಾದ ಸಮಯದಲ್ಲಿ ೧,೧೫೦ ಕಾರುಗಳು, ೧೧೮ ವ್ಯಾನ್‌ಗಳು, ೬೦ ಬಸ್‌ಗಳು ಮತ್ತು ೬೭೪ ದ್ವಿಚಕ್ರ ವಾಹನಗಳು ಪ್ರವೇಶಿಸುತ್ತವೆ. ಇಂಥ ಒಂದು ಹುಬ್ಬೇರಿಸುವ ಅಂಕಿ-ಅಂಶವನ್ನು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಬೆನ್ನಲ್ಲೇ ಇಲ್ಲಿನ ಕಡಿದಾದ ಪ್ರದೇಶಗಳಲ್ಲಿ ಪ್ರವಾಸಿಗರ ವಾಹನ ದಟ್ಟಣೆ ನಿರ್ವಹಣೆ ಉದ್ದೇಶ, ವಾಹನಗಳ ಪ್ರವೇಶದ ಮೇಲೆ ನಿಗಾ ವಹಿಸಲು ಮೇ ೭ ರಿಂದ ಜೂ. ೩೦ರ ವರೆಗೆ ಗಿರಿಧಾಮಗಳಿಗೆ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಎಲೆಕ್ಟ್ರಾನಿಕ್ ಪಾಸ್ (ಇ-ಪಾಸ್) ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ. ಈ ವಿಷಯ ಈಗ ಕೊಡಗಿನ ಪರಿಸರಾಸಕ್ತರಲ್ಲೂ ಚರ್ಚೆ ಹುಟ್ಟುಹಾಕಿದೆ.
    ಜಿಲ್ಲೆಯಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಬಿರು ಬೇಸಿಗೆಯ ಮಧ್ಯೆಯೂ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಏರುಮುಖದಲ್ಲಿದೆ. ಇಲ್ಲಿಯ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದಾಗಿ ಓಡಾಡಲು ಸಾಧ್ಯವಾಗದ ಸ್ಥಿತಿ ಇರುತ್ತದೆ. ರಜೆ ಮತ್ತು ವಾರಾಂತ್ಯ ದಿನಗಳಲ್ಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುತ್ತದೆ. ಪ್ರವಾಸಿಗರ ದಟ್ಟಣೆ ಜಾಸ್ತಿ ದಿನಗಳಲ್ಲಿ ಸ್ಥಳೀಯರ ದೈನಂದಿನ ಚಟುವಟಿಕೆಗಳಿಗೆ ತಿರುಗಾಡಲು ಆಗದಂಥ ಸ್ಥಿತಿ ಇರುತ್ತದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ದೊಡ್ಡ ತಲೆನೋವಾಗಿದೆ. ನದಿಮೂಲಗಳ ಮಾಲಿನ್ಯ ಸೇರಿದಂತೆ ಪರಿಸರಕ್ಕೆ ವಿರುದ್ಧ ಚಟುವಟಿಕೆಗಳಿಗೂ ಲಂಗು-ಲಗಾಮು ಇಲ್ಲದ ಪ್ರವಾಸೋದ್ಯಮವೇ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ಹಾಗಾಗಿ ಇಲ್ಲಿಯೂ ಊಟಿ ಮಾದರಿಯಲ್ಲಿ ಇ-ಪಾಸ್ ವ್ಯವಸ್ಥೆ ಜಾರಿ ಮಾಡಿದರೆ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಕೊಡಗು ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕಾದರೆ ರಸ್ತೆ ಮಾರ್ಗ ವ್ಯವಸ್ಥಿತವಾಗಿರಬೇಕು. ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ರಸ್ತೆ ಅಗಲೀಕರಣ ಅಸಾಧ್ಯವಾಗಿದೆ. ತಂತ್ರಜ್ಞಾನ ಬಳಸಿ ಊಟಿ ಮಾದರಿಯಲ್ಲಿ ಇ- ಪಾಸ್ ವ್ಯವಸ್ಥೆ ಮಾಡಲೇಬೇಕು.
    ವೈ.ಎಸ್. ಧನ್ಯಾ, ವಿದ್ಯಾರ್ಥಿ, ಯಡೂರು ಗ್ರಾಮ.

    ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಜಿಲ್ಲೆಯ ಜನಸಂಖ್ಯೆಗಿಂತ ದುಪ್ಪಟ್ಟಾಗಿದೆ. ಪ್ರವಾಸಿಗರನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಕೊಡ ಇ-ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ವ್ಯವಸ್ಥೆ ಜಾರಿ ಮಾಡಿದ್ದಲ್ಲಿ ಜಿಲ್ಲೆಯಲ್ಲಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಸರಿಯಾಗುವ ವಿಶ್ವಾಸವಿದೆ.
    ವಿನೀಲ್, ಉಪಕಾರ್ಯದರ್ಶಿ, ಜನಪರ ಸಂಘ (ರಿ.), ಮಾಲ್ದಾರೆ

    ಇ – ಪಾಸ್ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೆ ಪ್ರವಾಸಿಗರಿಗೆ ಆಗುತ್ತಿರುವ ಸಮಸ್ಯೆಗಳಲ್ಲಿ ಕೆಲವಾದರೂ ಸಮಸ್ಯೆಗಳನ್ನು ಬಗೆಹರಿಸಬಹುದು. ಇದರಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರ ವಿವರಗಳು ಹಾಗೂ ಸಂಖ್ಯೆ ದಾಖಲಾಗುವುದರಿಂದ ಬರುವ ಪ್ರವಾಸಿಗರಿಗೆ ಒದಗಿಸಬೇಕಾದ ಸೌಕರ್ಯಗಳನ್ನು ನೀಡಲು ಜಿಲ್ಲಾಡಳಿತಕ್ಕೆ ಸಹಕಾರಿಯಾಗಲಿದೆ. ವಾಹನ ದಟ್ಟಣೆ ತಪ್ಪಿಸಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ
    ಬೆನೆಡಿಕ್ಟ್ ಆರ್. ಸಲ್ಡಾನ, ಪ್ರಾಂಶುಪಾಲ, ಲಾರ್ಡ್ಸ್ ಡ್ರೈವಿಂಗ್ ಸ್ಕೂಲ್, ವಿರಾಜಪೇಟೆ

    ವಾಹನದ ದಟ್ಟಣೆಯನ್ನು ತಪ್ಪಿಸಲು ಇ – ಪಾಸ್ ಒಂದು ಉತ್ತಮ ಪರಿಕಲ್ಪನೆ. ವಾರಾಂತ್ಯ ಅಥವಾ ರಜಾ ದಿನಗಳು ಬಂದಂತಹ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕಿನ ರಸ್ತೆಗಳು ಕೇರಳದ ವಾಹನಗಳಿಂದ ತುಂಬಿ ಹೋಗುತ್ತವೆ. ಇದರಿಂದ ಸ್ಥಳೀಯರಿಗೂ ಸಂಚರಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಇ- ಪಾಸ್ ಮೂಲಕ ಜಿಲ್ಲೆಗೆ ಬರುವಂಥವರು ಮೊದಲೇ ತಮ್ಮ ಮಾಹಿತಿಯನ್ನು ಕೊಡುವುದರಿಂದ ಪೊಲೀಸ್ ಇಲಾಖೆ ನಗರದ ಮುಖ್ಯ ರಸ್ತೆಗಳಲ್ಲಿ ಉಂಟಾಗುವಂತಹ ವಾಹನ ದಟ್ಟಣೆಯನ್ನು ನಿವಾರಣೆ ಮಾಡಬಹುದು. ಹಾಗೂ ಸ್ಥಳೀಯರಿಗೂ ಇದರಿಂದ ರಕ್ಷಣೆ ಸಿಕ್ಕಂತಾಗುತ್ತದೆ.
    ಅನನ್ಯ ಬಿ. ಪಿ., ಬೇಟೋಳಿ, ವಿರಾಜಪೇಟೆ

    ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಕೆಲವು ಕಡೆ ರಸ್ತೆಗಳು ಹದಗೆಟ್ಟಿದ್ದು ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೇ ಇರುವ ಕಾರಣ ಅಲ್ಲಲ್ಲಿ ಸಮಸ್ಯೆಗಳು ಉಂಟಾಗುತ್ತಿದೆ. ಮತ್ತು ಕೆಲವು ಪ್ರವಾಸಿ ತಾಣಗಳಲ್ಲಿ ಸರಿಯಾದ ಪಾಕಿರ್ಂಗ್ ವ್ಯವಸ್ಥೆ ಇಲ್ಲದೇ ಪ್ರವಾಸಿಗರು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಮೊದಲು ಸರಿಪಡಿಸಬೇಕು.
    ಮೋಹಿತ್ ರಾಜ್, ಗೋಣಿಕೊಪ್ಪ ನಿವಾಸಿ

    ಕೊಡಗು ಜಿಲ್ಲೆಯ ವಾಣಿಜ್ಯ ಚಟುವಟಿಕೆಯಲ್ಲಿ ಪ್ರವಾಸಿಗರ ಪಾಲು ಕೊಂಚ ಜಾಸ್ತಿಯೇ ಇದೆ. ಹೊಸದಾಗಿ ಕಾನೂನು ಜಾರಿ ಮಾಡುವ ಮೊದಲು, ಸಾಕಷ್ಟು ಚರ್ಚೆ ಆಗಬೇಕು. ಸಾವಿರಾರು ಹೋಮ್ ಸ್ಟೇ, ಹೋಟೆಲ್, ಲಾಡ್ಜ್, ರೆಸಾರ್ಟ್ ಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದಾರೆ ಎನ್ನುವುದನ್ನು ಮರೆಯಬಾರದು. ಕೊಡಗು ಜಿಲ್ಲೆಗೆ ಇ-ಪಾಸ್ ಜಾರಿ ಮಾಡುವ ಮೊದಲು ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಆಗಬಹುದಾದ ಲಾಭ ನಷ್ಟವನ್ನು ಚಿಂತನೆ ಮಾಡಬೇಕು.
    ರವೀಂದ್ರ ವಿ. ರೈ, ಅಧ್ಯಕ್ಷ, ಚೇಂಬರ್ ಅಫ್ ಕಾಮರ್ಸ್, ಕುಶಾಲನಗರ

    ಕೊಡಗಿನ ರಕ್ಷಣೆ ನಮ್ಮ ಕೈಯಲ್ಲಿ ಇದೆ. ಖಂಡಿತವಾಗಿಯೂ ಇ-ಪಾಸ್ ಜಾರಿಯಾಗಬೇಕು. ಪ್ರವಾಸಿಗರ ಎಗ್ಗಿಲ್ಲದ ಪ್ರವೇಶದಿಂದ ಪರಿಸರ ಮಾಲಿನ್ಯ ಉಂಟಾಗಿ ಕೊಡಗಿನ ಪ್ರಕೃತಿಗ ಧಕ್ಕೆ ಉಂಟಾಗಿದೆ. ಎಲ್ಲೆಂದರಲ್ಲಿ ಪ್ರವಾಸಿಗರು ಲಗ್ಗೆ ಇಟ್ಟು ಕಸ ಎಸೆದು ನದಿ ಮೂಲಕ್ಕೂ, ಬೆಟ್ಟ ಗುಡ್ಡಗಳಲ್ಲಿಯೂ, ಕೊಡಗಿನ ಪರಂಪರಾಗತವಾಗಿ ಬಂದ ಪರಿಸರ ತಾಣಕೂ ಧಕ್ಕೆ ಉಂಟಾಗುತ್ತಿದೆ. ಸ್ವಚ್ಛ ಸುಂದರವಾಗಿ, ನೆಮ್ಮದಿಯಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಕೊಡಗಿನ ಜನತೆ ವಾಹನಗಳ ದಟ್ಟಣೆಯಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಜೀವಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಇದೆಲ್ಲವನ್ನೂ ತಡೆಹಿಡಿಯಲು ಸರ್ಕಾರ, ಜಿಲ್ಲಾಡಳಿತ, ನ್ಯಾಯಾಲಯದಿಂದ ಇ-ಪಾಸ್ ನೀಡಿದರೆ, ಕೊಡಗಿನ ಪರಿಸರ, ಜನರ ಪ್ರಾಣ, ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಸಹಕಾರಿಯಾಗುವುದು.
    ಮೂವೇರ ರೇಖಾ ಪ್ರಕಾಶ್, ಜಂಟಿ, ಕಾರ್ಯದರ್ಶಿ, ಅಖಿಲ ಕೊಡವ ಸಮಾಜ

    ಕೊಡಗಿನಲ್ಲೂ ಊಟಿ ಮಾದರಿಯಲ್ಲಿ ಇ-ಪಾಸ್ ವ್ಯವಸ್ಥೆ ಜಾರಿ ಮಾಡಬೇಕು ಈ ರೀತಿ ಮಾಡುವುದರಿಂದ ಪ್ರವಾಸಿಗರ ಲೆಕ್ಕ ಸಿಗಲಿದೆ. ಪಾಸ್ ನೀಡುವಾಗ ಕೆಲವೊಂದು ನಿಬಂಧನೆಗಳನ್ನು ನೀಡಬೇಕು. ಪ್ರಮುಖವಾಗಿ ಸ್ವಚ್ಛತೆ ಹಾಗೂ ನೀರಿನ ಮಿತಬಳಕೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕೊಡಗು ಅಶುಚಿತ್ವದ ತಾಣವಾಗಲಿದೆ. ಜತೆಗೆ ಕಾವೇರಿ ತವರಿನ ನಿವಾಸಿಗಳಿಗೆ ಕುಡಿಯಲು ನೀರು ಸಿಗದು.
    ಚಂದ್ರಪ್ಪ. ನಿವೃತ್ತ ಸೈನಿಕ, ಶನಿವಾರಸಂತೆ

    ಕೊಡಗಿನಲ್ಲೂ ಇ-ಪಾಸ್ ಅನುಷ್ಠಾನಕ್ಕೆ ತರುವ ತುರ್ತು ಅಗತ್ಯವಿದೆ. ಪ್ರತಿ ಪ್ರವಾಸಿ ಸ್ಥಳಕ್ಕೂ ಪ್ರವೇಶ ದರ ನಿಗದಿ ಮಾಡಬೇಕು. ಇದರಿಂದ ಸ್ಥಳೀಯ ಆಡಳಿತಕ್ಕೂ ಆದಾಯ ಬರಲಿದೆ. ಆನ್‌ಲೈನ್ ಮೂಲಕ ಪ್ರವೇಶಕ್ಕೆ ವ್ಯವಸ್ಥೆ ರೂಪಿಸಬೇಕು. ಪ್ರತಿ ಪ್ರವಾಸಿ ತಾಣಕ್ಕೂ ಪ್ರವಾಸಿಗರ ಭೇಟಿಗೆ ಗರಿಷ್ಠ ಮಿತಿ ನಿಗದಿಪಡಿಸಬೇಕು. ಕೊಡಗಿನಲ್ಲಿ ಪ್ರವಾಸಿಗರ ಭೇಟಿನಿಗೆ ನಿಯಂತ್ರಂಣ ಹೇರುವ ಅಗತ್ಯವಿದೆ.
    ಕರ್ನಲ್ ಸಿ.ಪಿ. ಮುತ್ತಣ್ಣ, ಮುಖ್ಯಸ್ಥರು, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts