ಕರೊನಾ ಲಸಿಕೆ, ಆಮ್ಲಜನಕ ಉಪಕರಣ : ಆಮದು ಶುಲ್ಕ ವಿನಾಯಿತಿ

oxy
Published on

ನವದೆಹಲಿ : ಕರೊನಾ ಲಸಿಕೆಗಳು, ಆಕ್ಸಿಜನ್ ಮತ್ತು ಆಕ್ಸಿಜನ್ ಪೂರೈಕೆಯ ಉಪಕರಣಗಳ ಮೇಲೆ ಆಮದು ಶುಲ್ಕ(ಕಸ್ಟಮ್ಸ್ ಡ್ಯೂಟಿ) ಮತ್ತು ಆರೋಗ್ಯ ಕರ(ಹೆಲ್ತ್​ ಸೆಸ್)ಗಳ ವಿನಾಯಿತಿ ನೀಡಿ ಭಾರತ ಸರ್ಕಾರ ಆದೇಶ ಹೊರಡಿಸಿದೆ. ದೇಶವು ಕರೊನಾ ಎರಡನೇ ಅಲೆಯ ಆಘಾತಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸರ್ಕಾರ ಈ ಘೋಷಣೆ ಮಾಡಿದೆ.

ತಕ್ಷಣವೇ ಜಾರಿಗೆ ಬರಲಿರುವ ಈ ವಿನಾಯಿತಿಯು ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಲಸಿಕೆಗಳು ಮತ್ತು ವೈದ್ಯಕೀಯ ಉಪಯೋಗದ ಆಮ್ಲಜನಕದ ಜೊತೆಗೆ, ಕರೊನಾ ಸೋಂಕಿತ ಅಥವಾ ಇತರೆ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಬಳಸಲಾಗುವ ಜನರೇಟರ್ಸ್​, ಸ್ಟೋರೇಜ್ ಟ್ಯಾಂಕ್ಸ್, ಫಿಲ್ಲಿಂಗ್ ಸಿಸ್ಟಮ್ಸ್​ ಮತ್ತು ಕಾನ್ಸಂಟ್ರೇಟರ್​ಗಳಂತಹ ಉಪಕರಣಗಳಿಗೂ ಈ ವಿನಾಯಿತಿ ಅನ್ವಯಿಸಲಿದೆ.

ಈ ನಿಟ್ಟಿನಲ್ಲಿ ಕಸ್ಟಮ್ಸ್​ ಕ್ಲಿಯರೆನ್ಸ್​ನ ವಿಚಾರಗಳನ್ನು ನಿರ್ವಹಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ಕೂಡ ಸರ್ಕಾರ ನೇಮಕ ಮಾಡಿದೆ. ಈ ನಿರ್ಧಾರದಿಂದ ಈ ಉಪಕರಣಗಳು ಸುಲಭವಾಗಿ ಲಭ್ಯವಾಗುವುದರೊಂದಿಗೆ ಅವುಗಳ ಬೆಲೆಗಳೂ ಅಗ್ಗವಾಗಲಿದೆ ಎಂದು ಸರ್ಕಾರ ಹೇಳಿದೆ.

ಹಾಲಿ ಲಭ್ಯವಿರುವ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎಂಬ ಎರಡು ಕರೊನಾ ಲಸಿಕೆಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿವೆ. ಇದೀಗ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗೆ ಪರವಾನಗಿ ಸಿಕ್ಕಿದ್ದು, ಹೈದರಾಬಾದ್​ನ ವಿರ್ಚೌವ್ ಬಯೋಟೆಕ್ ಕಂಪೆನಿ ಉತ್ಪಾದಿಸುವ ಯೋಜನೆ ಹೊಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net